ನೀವೆ ಅನುಭವಗಳ ಅಗಾಧ ಅರಳೀಮರ..
ಸತ್ತವರೆಲ್ಲಾ ನಕ್ಷತ್ರಗಳಾಗ್ತಾರೆ ಅನ್ನೋ ಕಲ್ಪನೆಯೇ
ಎಷ್ಟು ಚೆಂದ ಅಲ್ವಾ..?
ಯಾವುದೋ ನಕ್ಷತ್ರದೊಳಗೆ ಕೂತು ನನ್ನ ಮಗನ ಜೀವನ
ಹಸನಾಗಲೀ ಅಂತ ಹಾರೈಸ್ತಿರೋ ನನ್ನಪ್ಪನಿಗೆ ನನ್ನೆಲ್ಲಾ ನುಡಿ.. ನನ್ನೆಲ್ಲಾ ನಡೆ.. ನನ್ನೆಲ್ಲಾ ಯಶಸ್ಸು
ಅರ್ಪಣೆ..
ಜೂನ್ ಬಂತೂ ಅಂದ್ರೆ ಸಾಕು ಪೀಡಿಸಿ ಪೀಡಿಸಿ ಕಾಸು ಪಡೆದು ಪುಸ್ತಕ ತೆಗೆಸಿಕೊಳ್ಳುವಾಗ ನನ್ನ ಕಣ್ಣಲ್ಲಿದ್ದುದು ಸಂತಸ ಮಾತ್ರ.. ಆದರೆ ನಿಮ್ಮ ಜೇಬು ಅಳುತ್ತಿದ್ದುದು
ನನಗೆ ಕಾಣಿಸುತ್ತಲೇ ಇರಲಿಲ್ಲ.. ನೀವು ಅದಾವುದನ್ನೂ ಹೇಳುತ್ತಲೂ ಇರಲಿಲ್ಲ.. ಕ್ಷಮಿಸಿ ಅಪ್ಪಾ.. ಆದರೆ
ಅವತ್ತು ನೀವು ಕೊಡಿಸಿದ್ದ ಪುಸ್ತಕಗಳು ಮತ್ತದರ ಅನುಭವ ಇವತ್ತು ನನಗೆ ಅನ್ನು ನೀಡುತ್ತಿದೆ..
ನೀವು ಇಲ್ಲವಾಗಿಲ್ಲ ಅನ್ನೋದನ್ನ ನನಗೆ ನಂಬೋಕಾಗ್ತಿಲ್ಲ..
ನೀವು ಸದಾ ನನ್ನೊಡನೆ.. ಅದಕ್ಕೆ ನಿಮಗೊಂದು ಸಮಾಧಿ ಕಟ್ಟು ಅನ್ನುವ ಯಾರ ಮಾತನ್ನೂ ನಾನು ಕೇಳಿಲ್ಲ..
ನೀವೆ ಅನುಭವಗಳ ಅಗಾಧ ಅರಳೀಮರ.. ನಿಮ್ಮೆದೆ ಮೇಲೊಂದು
ಅರಳಿ ಗಿಡ ನೆಟ್ಟು ನಿಮ್ಮನ್ನು ಸ್ಮಾರಕವಾಗಿಸಲು ನನಗೆ ಮನಸಿಲ್ಲ.. ನೀವು ಬಿಟ್ಟ ಅನುಭವಗಳ ಬೇರುಗಳ
ಆಸರೆ ಪಡೆದು ಬದುಕುತ್ತಿದ್ದೇನೆ.. ನೀವು ನಿರಾಕಾರ.. ನೀವು ಅಮೂರ್ತ.. ನೀವೇ ಚೈತನ್ಯ..
ಜನರನ್ನು ಮೆಚ್ಚಿಸೋಕಾಗಲ್ಲ… ನೀನು ಮೆಚ್ಚುವಂತೆ
ಬದುಕು ಅಂತ ಹೇಳಿಕೊಟ್ಟ ನಿಮ್ಮದೇ ಮಾತಿನಂತೆ.. ನಿಮ್ಮದೇ ಕಲ್ಪನೆಯಂತೆ ಬದುಕು ಸಾಗಿಸುವ ಹಂಬಲದಲ್ಲಿ ಸಂಘಷದಲ್ಲಿ ಬದುಕು ಸಾಗಿಸುವುದೇ ಸಾಧನೆಯಾಗಿದೆ..
ಸತ್ತ ಕನಸುಗಳ ಮುಂದೆ ಬಿಕ್ಕಿ ಅತ್ತು ಬರಿದಾದ ಕಣ್ಣಾಲಿಗಳ
ಕೊನೆ ಹನಿಯಲ್ಲೂ ನಿಮ್ಮದೇ ನೆನಪು.. ಮತ್ತೆ ಮತ್ತೆ ನೆನಪಾಗೋ ನಿಮಗಾಗಿ ಇದೊಂದು ಅಕ್ಷರ ನಮನ..