Wednesday, December 28, 2016

ಬದಲಾಗಿದ್ದು ನೋಟು ಅಷ್ಟೇ.. ನೋಟವಲ್ಲ..
----------------------------------------------------------------

               ಹೌದು.. ಇಲ್ಲಿ ಹೀಗೆಯೇ.. ಇದು ಇಂದು ನೆನ್ನೆಯದಲ್ಲ.. ಶತಶತಮಾನಗಳಿಂದಲೂ ಹೀಗೆಯೇ.. ನಮಗೆ ತಿಳಿದಿರುವ ಇತಿಹಾಸದಲ್ಲಿ.. ನಮಗೆ ತಿಳಿಯದಿರುವ ಪುರಾಣದಲ್ಲಿ.. ಯಾರಿಗೂ ಅರ್ಥವಾಗದ ಸತ್ಯದಲ್ಲಿ.. ರಂಜನೆಯ ಸುಳ್ಳಿನಲ್ಲಿ.. ಸಮರ್ಥನೆಯಲ್ಲಿ.. ಎಲ್ಲೆಡೆಯಲ್ಲಿಯೂ ಇದು ಹೀಗೆಯೇ... ಇಂದಿಗೂ ಹೀಗೆಯೆ..

ಭರತಖಂಡವೆಂಬೋ ಭಾರತ ದೇಶದಲ್ಲಿ ಇದು ಎಂದೆಂದಿಗೂ ಹೀಗೆಯೇ.. 
ಇಲ್ಲಿ ಅರ್ಜುನ ಬಿಲ್ವಿದ್ಯಾ ಪಾರಂಗತನಾಗಲು ಏಕಲವ್ಯನ ಬೆರಳು ಬಲಿಕೊಡಬೇಕಾಯ್ತು.. ರಾಮ ರಾಜಶ್ರೇಷ್ಟನಾಗಲು ವಾಲಿ, ಶಂಭೂಕರು ಬಲಿಯಾಗಬೇಕಾಯ್ತು, ಅದೇ ರಾಮ ಮರ್ಯಾದಾ ಪುರುಷೋತ್ತಮನಾಗಲು ಸೀತೆ ಬದುಕು ಸವೆಸಬೇಕಾಯ್ತು, ಲಕ್ಷ್ಮಣ ಆದರ್ಶ ತಮ್ಮನಾಗಲು ಊರ್ಮಿಳೆ ನಲುಗಬೇಕಾಯ್ತು. ವಾಮನ ತ್ರ್ರಿವಿಕ್ರಮನಾಗಲು ಬಲಿಯ ‘ಬಲಿ’ಯಾಗಬೇಕಾಯ್ತು... ಚಾಮುಂಡಿ ಎಂಬೋ ಹೆಣ್ಣು ಅಧಿದೇವತೆಯಾಗಲು ಮಹಿಷನ ‘ಮರ್ಧನ”ನವಾಗಬೇಕಾಯ್ತು.. ಸುಳ್ಳು ಪ್ರಭುತ್ವ ಸಾಧಿಸಲು ಕಲಬುರ್ಗಿ ಕಣ್ಮುಚ್ಚಬೇಕಾಯ್ತು.. ಅನ್ಯಾಯ ಅಬ್ಬರಿಸಲು ನ್ಯಾಯ ಬಾಯ್ಮುಚ್ಚಿ ಕೂರಬೇಕಾಯ್ತು.. ಎಲ್ಲವೂ ಆಯ್ತು.. ಆದರೀಗ...?

ವಿಜಯ ಮಲ್ಯನಂತಹ ಶೋಕಿಲಾಲರು ಸಾಲ ಮಾಡಲು, ಮಾಡಿದ ಸಾಲ ತೀರಿಸದೇ ದೇಶ ಬಿಟ್ಟು ಹೋಗಲು, ಅವನ ಸಾಲ ಮನ್ನ ಮಾಡಲು ನಮ್ಮ ಮನೆಯ ಸಾಸಿವೆ ಡಬ್ಬಿಗಳಲ್ಲಿದ್ದ 500, 1000ದ ನೋಟು ಹಿಡಿದು ನಮ್ಮವ್ವರಾದಿಯಾಗಿ ನಾವೆಲ್ಲಾ ಬ್ಯಾಂಕುಗಳ ಮುಂದೆ ಸಾಲುಗಟ್ಟಿ ನಿಲ್ಲಬೇಕಾಯ್ತು.

ಹೌದು.. ದೇಶಕ್ಕೊಂದು ಅಚ್ಛೇದಿನ್ ಬರಬೇಕಾಗಿದೆ.. ಬರಲಿ ಬಿಡಿ. ಅದಕ್ಕಾಗಿ ಅಮಾಯಕರು ಹತ್ತಾರು ಮಂದಿ ಬಿಸಿಲಿನಲ್ಲಿ ನಿಂತು ಬಲಿಯಾಗಬೇಕಿದೆ.. ಆಗಲಿ ಬಿಡಿ. ಎಲ್ಲಕ್ಕಿಂತ, ಎಲ್ಲರಿಗಿಂತ ದೇಶ ಮುಖ್ಯ. 
ಯಾರು ಸ್ವಾಮಿ ಇಲ್ಲ ಎಂದವರು..? ಕಾಳ ಧನಿಕರು ಬೀದಿಯಲ್ಲಿ ನಿಲ್ಲುವ ಕಾಲ ಬರುತ್ತದೆ ಎಂದು ಕಾಯುತ್ತಿದ್ದವರಿಗೆ ಕಾಳು ಕಡ್ಡಿ ಕೊಳ್ಳಲು ಕಾಸಿಲ್ಲದೇ ಬೀದಿಯಲ್ಲಿ ನಿಂತ ಸಾಮಾನ್ಯರಲ್ಲಿ ಸಾಮಾನ್ಯ ಕಣ್ಣಿಗೆ ಸಿಕ್ಕಿದನೇ ಹೊರತು.. ಸೂಟು ಬೂಟು ತೊಟ್ಟ ಒಬ್ಬೇ ಒಬ್ಬ ವ್ಯಕ್ತಿ ಸರತಿ ಸಾಲಿನಲ್ಲಿ ಕಾಣಲಿಲ್ಲ. 

ನವೆಂಬರ್ 8 ರ ರಾತ್ರಿ ಸನ್ಮಾನ್ಯ ಪ್ರಧಾನ ಸೇವಕರು ಈ ರೀತಿಯ ಘೋಷಣೆಯೊಂದನ್ನು ಹೊರ ಹಾಕುತ್ತಿದ್ದಂತೆ ಮುಂದಿನ ಮೂರು ದಿನ ಬ್ಯಾಂಕ್, ಎಟಿಎಂಗಳು ಕಾರ್ಯನಿರ್ವಹಿಸಲ್ಲ ಅನ್ನೋ ಆತಂಕದಿಂದ ಈ ದೇಶದ ಸಾಮಾನ್ಯ ವರ್ಗ ಎಟಿಎಂಗಳ ಮುಂದೆ ಸಾಲುಗಟ್ಟಿ ನಿಂತಿತ್ತು. ಆದರೆ ಈ ದೇಶದ ಘಟಾನುಘಟಿ ರಾಜಕಾರಣಿಗಳಲ್ಲೊಬ್ಬರೂ ಎಟಿಎಂ ಗಳ ಮುಂದೆ ನಿಂತದ್ದಾಗಲೀ, ಬ್ಯಾಂಕುಗಳಿಗೆ ಬಂದು ಹಣ ಬದಲಾವಣೆ ಮಾಡಿಸಿಕೊಂಡದ್ದಾಗಲೀ, ಬೆರಳಿಗೆ ಇಂಕು ಹಾಕಿಸಿಕೊಂಡದ್ದಾಗಲೀ ನಮಗಂತೂ ಕಾಣಲಿಲ್ಲ, ಯಾವುದೇ ಮಾಧ್ಯಮದಲ್ಲೂ ವರದಿಯಾಗಲಿಲ್ಲ. ಇದರರ್ಥ.. ಅವರ ಬಳಿ ನಗದು ರೂಪದ ಹಣ ಇರಲೇ ಇಲ್ಲವೇ.. ಅಥವಾ ಇದ್ದ ಹಣವೆಲ್ಲಾ ಆಗಲೇ...!!!???

ಮನೆ ಕಟ್ಟಲೆಂದು ಇಟ್ಟುಕೊಂಡಿದ್ದ 40 ಸಾವಿರ ರೂಪಾಯಿ ಬ್ಯಾಂಕಿನಲ್ಲಿ ಕಳುವಾಗಿದ್ದಕ್ಕೆ ಜೀವನಕ್ಕೇ ಹೆದರಿ ಪ್ರಾಣ ಕಳೆದುಕೊಂಡ ಅಸಹಾಯಕ ಹೆಂಗಸು ಒಂದು ಕಡೆ, ಸರತಿ ಸಾಲಿನಲ್ಲಿ ನಿಂತು ಕುಸಿದು ಬಿದ್ದು ಪ್ರಾಣ ಕಳೆದುಕೊಂಡ ವಯೋವೃದ್ಧ ಮತ್ತೊಂದು ಕಡೆ… ಇವರೆಲ್ಲರ ಸಮಾಧಿಯ ಮೇಲೆ ಎದ್ದು ನಿಲ್ಲಬೇಕಿದೆ ಅಚ್ಛೇದಿನ್ ಎನ್ನುವ ಸುಂದರ ಸೌಧ.. 

ಅಭಿವೃದ್ಧಿಯ ಹೆಸರಿನ ನಮ್ಮ ತಿಕ್ಕಲುತನಕ್ಕೆ, ಅರ್ಜುನನಂತಹ ಹುಂಬತನಕ್ಕೆ ಅದೆಷ್ಟೋ ಏಕಲವ್ಯರು ಬದುಕು ಕಳೆದುಕೊಳ್ಳುತ್ತಿದ್ದಾರೆ.. 

ಸನ್ಮಾನ್ಯ ಪ್ರಜಾಪ್ರಭುಗಳೇ... ಪ್ರಧಾನ ಸೇವಕರೇ.. ಬದಲಾಗಬೇಕಿರುವುದು ಕರೆನ್ಸಿ ನೋಟಲ್ಲ.. ನೋಟ.. 2016ರ ಈ ವೇಳೆಯಲ್ಲಿ ನಾವು ಕ್ಯಾಷ್‍ಲೆಸ್ ಸೊಸೈಟಿಯ ಬಗ್ಗೆ ಮಾತನಾಡುತ್ತಿದ್ದೀರಿ.. ಅದಕ್ಕೂ ಮೊದಲು ನಮ್ಮ ಮನೆ, ಮನಗಳಲ್ಲಿ ಬಲವಾಗಿ ಬೇರೂರಿರುವ ಜಾತಿಯತೆಯ ಬೇರನ್ನು ಬುಡಮಟ್ಟ ಕೀಳಬೇಕಿದೆ.. ಕ್ಯಾಸ್ಟ್ಲೆಸ್ ಸೊಸೈಟಿಯ ನಿರ್ಮಾಣ ಮಾಡಬೇಕಿದೆ. ಸಮಾಜದ ಮೂಲೆ ಮೂಲೆಯಲ್ಲೂ ಚಾದರ ಹೊದ್ದು ಮಲಗಿರುವ ಮನುವಾದದ ಪ್ರತಿಕೃತಿಗಳಿಗೆ ಬೆಂಕಿ ಹಚ್ಚಬೇಕಿದೆ..

ಪ್ರಧಾನ ಸೇವಕರೇ.. ಈ ಅದ್ಭುತ ಕಾರ್ಯಕ್ಕೆ ನಿಮ್ಮೊಂದಿಗೆ ನಾವಿದ್ದೇವೆ.. ನಡು ರಾತ್ರಿ, ಇಡೀ ಹಗಲು, ಹೆಗಲಿಗೆ ಸಂವಿಧಾನದ ಬಂದೂಕು ತೊಟ್ಟು, ಸಮಾನತೆಯ ಕಾಡತೂಸುಗಳನ್ನು ತೂರಿಬಿಡೋಣ.. ಮನುವಾದದ ಕತ್ತಲಲ್ಲಿ ಸಮಾನತೆಯ ಜ್ಯೋತಿ ಹಚ್ಚೋಣ.. ಮಾಡಿಬಿಡಿ ಒಂದು ಸರ್ಜಿಕಲ್ ಸ್ರ್ಟೈಕ್.. ಜಾತಿಯತೆ ತುಂಬಿರುವ ಮನಸ್ಸುಗಳೊಳಗೆ..
ಕಟ್ಟೋಣ ಹೊಸದೊಂದು ಸಮಾಜ.. ಕ್ಯಾಸ್ಟ್‍ಲೆಸ್ ಸೊಸೈಟಿ. ಜೊತೆಗೆ ಕ್ಯಾಷ್‍ಲೆಸ್ ಸೊಸೈಟಿ ಕೂಡಾ..

ನನ್ನವರ ನೆತ್ತರು



ಮುಸ್ಸಂಜೆಯಲ್ಲಿ ಮನೆಗೆ ಬಂದ ಮಗನ ಅಂಗಾಲು ಕಂಡು
ನನ್ನವ್ವ ಕೇಳಿದ್ದಳು
“ಏನಾಯಿತಪ್ಪ..? ಏನೀ ರಕ್ತ..?
“ರಕ್ತ.. ಇದು ನನ್ನ ರಕ್ತವಲ್ಲವ್ವಾ..
ಬೀದಿ ಬದಿಯಲ್ಲಿ ಹಾದು ಬರುವಾಗ
ಹಾದಿಗುಂಟ ಹರಿದ ರಕ್ತ ಅಂಗಾಲಿಗಂಟಿದೆ”
“ಏನು..! ಹಾದಿಯಲ್ಲಿ ರಕ್ತವೇ..? ಯಾರದಪ್ಪಾ..?
ಯಾರದೆಂದು ಹೇಳಲವ್ವಾ..

ವಿದ್ಯೆ ಕಲಿತನೆಂಬ ಜಿದ್ದಿಗೆ ಬಲಿಪಡೆದ ಏಕಲವ್ಯನ ಬೆರಳಿನಿಂದರಿದಿರೋ ರಕ್ತ
ಹಾದಿಯುದ್ದಕ್ಕೂ ಹೆಪ್ಪುಗಟ್ಟಿದೆ.
ತಪಸ್ಸಿಗೆ ನಿಂತು ತಲೆ ಕಳೆದುಕೊಂಡ ಶಂಭೂಕನ ನೆತ್ತಿಯಿಂದ
ನೆತ್ತರು ಹರಿಯುತ್ತೇ ಇದೆ.
ಪರಾಕ್ರಮಿಯಾಗಿ ಪ್ರಾಣ ಬಿಟ್ಟ ರಾವಣನ ರಕ್ತವಿನ್ನೂ ಇಂಗಿಲ್ಲವ್ವ
ಹರಿಯುತ್ತಲೇ ಇದೆ ಹೊಳೆ ಹೊಳೆಯಾಗಿ..

ರಕ್ತ ರಂಗೋಲಿ ದಾಟಿ ಬಂದವರೂ ಉಳಿದಿಲ್ಲ.
ಮಂತ್ರ ಕೇಳಿದವನ ಕಿವಿಗೆ ಕಾದ ಸೀಸೆ ಸುರಿಸಿಕೊಂಡು
ಕಾಲು ದಾರಿಯಲ್ಲಿ ಹರಿದ ನೆತ್ತರು..
ಅಕ್ಷರ ಕಲಿತನೆಂದು ನಾಲಿಗೆ ಕೊಯ್ಸಿಕೊಂಡು
ನಾಲ್ಕು ದಿಕ್ಕಿಗೂ ಹರಿದ ನೆತ್ತರು..
ಪ್ರೀತಿಸಿದ ತಪ್ಪಿಗೆ ಪ್ರಾಣತೆತ್ತ ಪ್ರಾಮಾಣಿಕ ನೆತ್ತರು
ಸತ್ಯ ಹೇಳಿದ ಕಲಬುರ್ಗಿ ಎದೆಯಿಂದರಿದ ನೆತ್ತರು..

ನನ್ನವರ ನೆತ್ತರು ಇಂದಿಗೂ ನಿಂತಿಲ್ಲವ್ವ
ಉಳ್ಳವರ ಮನೆಯೆದುರು ಬೀದಿಯಲ್ಲಿ
ದೇವಸ್ಥಾನಗಳ ಬಲಿಪೀಠಗಳಡಿಯಲ್ಲಿ
ಅಧಿಕಾರಶಾಹಿಗಳ ಕುರ್ಚಿ ಕಾಲುಗಳ ಸಂದಿಯಲ್ಲಿ..
ಹರಿಯುತ್ತಲೇ ಇದೆಯವ್ವಾ ನೆತ್ತರು..
ನನ್ನವರ ನೆತ್ತರು.. ನನ್ನ ಕಾಲಿಗಂಟಿದ ನೆತ್ತರು..


ಮಾತನಾಡುತ್ತೇವೆ...


-----------------------------------------------------------
ಯಾವುದೇ ದೋಷವಿಲ್ಲವಂತೆ
ಸರಿಗತ್ತಲ ರಾತ್ರಿಯಲ್ಲಿ ಸ್ಖಲಿಸಿದವನಿಗೆ
ಆದರೆ ನೋವುಂಡು ನಗುವ ಹೆಣ್ಣಿಗೆ
ತಿಂಗಳ ಮುಟ್ಟು ಮೈಲಿಗೆ.

ಮೈಯ ಕಸುವು ತೊಡೆಗಿಳಿಸಿ
ಉಸ್ಸೆಂದು ತಿರುಗಿ ಮಲಗಿ ಬೆವರು ಒರೆಸಿಕೊಂಡವನಿಗೆ
ಮತ್ತೇ ಈಜುವ ತವಕ.
ನವಮಾಸ ಹೊತ್ತು
ಜೀವಮಾನದ ನೋವುಂಡು ಹೆರುವ ಹೆಣ್ಣಿಗೆ
ಬಾಣಂತಿ ಸೂತಕ.

ಸತ್ತ ಮಡದಿಯ ಸಮಾಧಿಯ ಮಣ್ಣು ಆರಿಲ್ಲ
ಹಾಲುಗಲ್ಲದ ಕಂದಮ್ಮಳಿಗೆ
ಮತ್ತೊಬ್ಬ ಅಮ್ಮಳನ್ನು ತಂದೇಬಿಟ್ಟ..
ಅರಿಸಿನದ ಘಾಟು ಆರುವ ಮುನ್ನವೇ
ಗಂಡನ ಕಳೆದುಕೊಂಡವಳಿಗೆ ವಿಧವೆಯ ಪಟ್ಟ.

ಬರಿಯೊಡಲಿಗೆ ಬಡಬಾಗ್ನಿಯ ಕಿಚ್ಚಿಟ್ಟು
ಕಿಬ್ಬೊಟ್ಟೆಯ ನೋವುಂಡಾಗ,
ಉನ್ಮತ್ತದ ಉತ್ತುಂಗದಲ್ಲಿ
ಎವೆ ಮುಚ್ಚಿದ ಕಣ್ಣೀರ ಹನಿ ದಿಂಬು ತೋಯಿಸಿ
ಒದ್ದೆಯಾಗಿಸಿದಾಗ... ಮೈಯ ಮುದ್ದೆಯಾಗಿಸಿದಾಗ
ಮೈಲಿಗೆಯ ಮಾತಿಲ್ಲ.. ಸೂತಕದ ಸದ್ದಿಲ್ಲ..

ಮಾತನಾಡಬೇಡೆಂದಿರಿ... ದನಿಯೆತ್ತಲಿಲ್ಲ
ತಲೆ ತಗ್ಗಿಸೆಂದಿರಿ.. ತಲೆಯೆತ್ತಲಿಲ್ಲ
ಉಸಿರು ಬಿಡಬೇಡೆಂದಿರಿ.. ಅತ್ತದ್ದೂ ಕೇಳಿಸಲಿಲ್ಲ..
ಗಂಡಸಿಗೆ ಸರಿಸಮಳಲ್ಲವೆಂದಿರಿ.. ಹೌದೆಂದೆವು
ಸ್ವಾತಂತ್ರ್ಯವಿಲ್ಲವೆಂದಿರಿ.. ಸರಿಯೆಂದೆವು
ಹುಟ್ಟಿನ ಬಗ್ಗೆ ಮಾತನಾಡಿದಿರಿ.. ತಿರುಗಿ ಮಾತನಾಡಲಿಲ್ಲ
ಆದರೀಗ..

ಮುಟ್ಟಿನ ಬಗ್ಗೆ ಮಾತನಾಡುತ್ತಿದ್ದೀರಿ..
ಮಾತನಾಡುತ್ತೇವೆ..
ಹೆಣ್ತನಕ್ಕೆ ಘಾಸಿ ಮಾಡುವ ನಿಮ್ಮ ವಿರುದ್ಧ ಮಾತನಾಡುತ್ತೇವೆ.
ನಾವು ಮುಟ್ಟಲಾಗದ ನಿಮ್ಮ ಅಸ್ಪøಶ್ಯ ದೇವರ ವಿರುದ್ಧ ಮಾತನಾಡುತ್ತೇವೆ.