ನನ್ನವರ ನೆತ್ತರು
ಮುಸ್ಸಂಜೆಯಲ್ಲಿ ಮನೆಗೆ ಬಂದ ಮಗನ ಅಂಗಾಲು ಕಂಡು
ನನ್ನವ್ವ ಕೇಳಿದ್ದಳು
“ಏನಾಯಿತಪ್ಪ..? ಏನೀ ರಕ್ತ..?
“ರಕ್ತ.. ಇದು ನನ್ನ ರಕ್ತವಲ್ಲವ್ವಾ..
ಬೀದಿ ಬದಿಯಲ್ಲಿ ಹಾದು ಬರುವಾಗ
ಹಾದಿಗುಂಟ ಹರಿದ ರಕ್ತ ಅಂಗಾಲಿಗಂಟಿದೆ”
“ಏನು..! ಹಾದಿಯಲ್ಲಿ ರಕ್ತವೇ..? ಯಾರದಪ್ಪಾ..?
ಯಾರದೆಂದು ಹೇಳಲವ್ವಾ..
ವಿದ್ಯೆ ಕಲಿತನೆಂಬ ಜಿದ್ದಿಗೆ ಬಲಿಪಡೆದ ಏಕಲವ್ಯನ ಬೆರಳಿನಿಂದರಿದಿರೋ ರಕ್ತ
ಹಾದಿಯುದ್ದಕ್ಕೂ ಹೆಪ್ಪುಗಟ್ಟಿದೆ.
ತಪಸ್ಸಿಗೆ ನಿಂತು ತಲೆ ಕಳೆದುಕೊಂಡ ಶಂಭೂಕನ ನೆತ್ತಿಯಿಂದ
ನೆತ್ತರು ಹರಿಯುತ್ತೇ ಇದೆ.
ಪರಾಕ್ರಮಿಯಾಗಿ ಪ್ರಾಣ ಬಿಟ್ಟ ರಾವಣನ ರಕ್ತವಿನ್ನೂ ಇಂಗಿಲ್ಲವ್ವ
ಹರಿಯುತ್ತಲೇ ಇದೆ ಹೊಳೆ ಹೊಳೆಯಾಗಿ..
ರಕ್ತ ರಂಗೋಲಿ ದಾಟಿ ಬಂದವರೂ ಉಳಿದಿಲ್ಲ.
ಮಂತ್ರ ಕೇಳಿದವನ ಕಿವಿಗೆ ಕಾದ ಸೀಸೆ ಸುರಿಸಿಕೊಂಡು
ಕಾಲು ದಾರಿಯಲ್ಲಿ ಹರಿದ ನೆತ್ತರು..
ಅಕ್ಷರ ಕಲಿತನೆಂದು ನಾಲಿಗೆ ಕೊಯ್ಸಿಕೊಂಡು
ನಾಲ್ಕು ದಿಕ್ಕಿಗೂ ಹರಿದ ನೆತ್ತರು..
ಪ್ರೀತಿಸಿದ ತಪ್ಪಿಗೆ ಪ್ರಾಣತೆತ್ತ ಪ್ರಾಮಾಣಿಕ ನೆತ್ತರು
ಸತ್ಯ ಹೇಳಿದ ಕಲಬುರ್ಗಿ ಎದೆಯಿಂದರಿದ ನೆತ್ತರು..
ನನ್ನವರ ನೆತ್ತರು ಇಂದಿಗೂ ನಿಂತಿಲ್ಲವ್ವ
ಉಳ್ಳವರ ಮನೆಯೆದುರು ಬೀದಿಯಲ್ಲಿ
ದೇವಸ್ಥಾನಗಳ ಬಲಿಪೀಠಗಳಡಿಯಲ್ಲಿ
ಅಧಿಕಾರಶಾಹಿಗಳ ಕುರ್ಚಿ ಕಾಲುಗಳ ಸಂದಿಯಲ್ಲಿ..
ಹರಿಯುತ್ತಲೇ ಇದೆಯವ್ವಾ ನೆತ್ತರು..
ನನ್ನವರ ನೆತ್ತರು.. ನನ್ನ ಕಾಲಿಗಂಟಿದ ನೆತ್ತರು..
No comments:
Post a Comment