Wednesday, December 28, 2016

ಮಾತನಾಡುತ್ತೇವೆ...


-----------------------------------------------------------
ಯಾವುದೇ ದೋಷವಿಲ್ಲವಂತೆ
ಸರಿಗತ್ತಲ ರಾತ್ರಿಯಲ್ಲಿ ಸ್ಖಲಿಸಿದವನಿಗೆ
ಆದರೆ ನೋವುಂಡು ನಗುವ ಹೆಣ್ಣಿಗೆ
ತಿಂಗಳ ಮುಟ್ಟು ಮೈಲಿಗೆ.

ಮೈಯ ಕಸುವು ತೊಡೆಗಿಳಿಸಿ
ಉಸ್ಸೆಂದು ತಿರುಗಿ ಮಲಗಿ ಬೆವರು ಒರೆಸಿಕೊಂಡವನಿಗೆ
ಮತ್ತೇ ಈಜುವ ತವಕ.
ನವಮಾಸ ಹೊತ್ತು
ಜೀವಮಾನದ ನೋವುಂಡು ಹೆರುವ ಹೆಣ್ಣಿಗೆ
ಬಾಣಂತಿ ಸೂತಕ.

ಸತ್ತ ಮಡದಿಯ ಸಮಾಧಿಯ ಮಣ್ಣು ಆರಿಲ್ಲ
ಹಾಲುಗಲ್ಲದ ಕಂದಮ್ಮಳಿಗೆ
ಮತ್ತೊಬ್ಬ ಅಮ್ಮಳನ್ನು ತಂದೇಬಿಟ್ಟ..
ಅರಿಸಿನದ ಘಾಟು ಆರುವ ಮುನ್ನವೇ
ಗಂಡನ ಕಳೆದುಕೊಂಡವಳಿಗೆ ವಿಧವೆಯ ಪಟ್ಟ.

ಬರಿಯೊಡಲಿಗೆ ಬಡಬಾಗ್ನಿಯ ಕಿಚ್ಚಿಟ್ಟು
ಕಿಬ್ಬೊಟ್ಟೆಯ ನೋವುಂಡಾಗ,
ಉನ್ಮತ್ತದ ಉತ್ತುಂಗದಲ್ಲಿ
ಎವೆ ಮುಚ್ಚಿದ ಕಣ್ಣೀರ ಹನಿ ದಿಂಬು ತೋಯಿಸಿ
ಒದ್ದೆಯಾಗಿಸಿದಾಗ... ಮೈಯ ಮುದ್ದೆಯಾಗಿಸಿದಾಗ
ಮೈಲಿಗೆಯ ಮಾತಿಲ್ಲ.. ಸೂತಕದ ಸದ್ದಿಲ್ಲ..

ಮಾತನಾಡಬೇಡೆಂದಿರಿ... ದನಿಯೆತ್ತಲಿಲ್ಲ
ತಲೆ ತಗ್ಗಿಸೆಂದಿರಿ.. ತಲೆಯೆತ್ತಲಿಲ್ಲ
ಉಸಿರು ಬಿಡಬೇಡೆಂದಿರಿ.. ಅತ್ತದ್ದೂ ಕೇಳಿಸಲಿಲ್ಲ..
ಗಂಡಸಿಗೆ ಸರಿಸಮಳಲ್ಲವೆಂದಿರಿ.. ಹೌದೆಂದೆವು
ಸ್ವಾತಂತ್ರ್ಯವಿಲ್ಲವೆಂದಿರಿ.. ಸರಿಯೆಂದೆವು
ಹುಟ್ಟಿನ ಬಗ್ಗೆ ಮಾತನಾಡಿದಿರಿ.. ತಿರುಗಿ ಮಾತನಾಡಲಿಲ್ಲ
ಆದರೀಗ..

ಮುಟ್ಟಿನ ಬಗ್ಗೆ ಮಾತನಾಡುತ್ತಿದ್ದೀರಿ..
ಮಾತನಾಡುತ್ತೇವೆ..
ಹೆಣ್ತನಕ್ಕೆ ಘಾಸಿ ಮಾಡುವ ನಿಮ್ಮ ವಿರುದ್ಧ ಮಾತನಾಡುತ್ತೇವೆ.
ನಾವು ಮುಟ್ಟಲಾಗದ ನಿಮ್ಮ ಅಸ್ಪøಶ್ಯ ದೇವರ ವಿರುದ್ಧ ಮಾತನಾಡುತ್ತೇವೆ.

Sunday, March 20, 2016

ಅಸಂಗತ...





ಸತ್ತ ಕಂಬಳಿಯ ನೇಯುತ್ತಿವೆ ನೆತ್ತರ ನೂಲುಗಳು
ಎಲ್ಲೆಲ್ಲೂ ಹುತ್ತ.. ನಾಗರೆಡೆಯ ನೆರಳು
ರಕ್ತ ರಂಗೋಲಿ...
ಅಷ್ಟಮಂಗಲದಲ್ಲಿ ಮೂರೇ ಪ್ರಶ್ನೆ
ನಾನು ಯಾರು..? ನಾನು ಯಾರು...? ನಾನು ಯಾರು...?
ಕಂಬಳಿಯಲ್ಲಿ ಕೂರೆ ಸೂಸಿ, ನಡೆದಿದೆ
ಕನಸುಗಳ ಶವಯಾತ್ರೆ, ಒಣಗಣ್ಣ ತರ್ಪಣ
ಹಸಿದ ಒಡಲಿನ ಕಿಚ್ಚು,
ಕೂಳು ಮಡಿಕೆಯ ಸುಡುತ್ತಿದೆ
ಸಾವಿಗೂ ಇಲ್ಲಿ ಸಾವಿರ ಸುಂಕ
ನಾಗರ ಹೆಡೆಯದ್ದದು ನೆರಳಲ್ಲ... ರಕ್ತ ರಂಗೋಲಿ
ಕೂಗುವ ದನಿಯ ಕೊರಳ ಕೂಯ್ದಿರೊ ರಕ್ತ
ಓಡೋ ಕಾಲಿನ ಬೆರಳು ಕಡಿದಿರೋ ರಕ್ತ
ಕಂಡ ಕನಸುಗಳಿಗೆ ಕಣ್ಣೆದುರೇ ಗರ್ಭಪಾತ
ಅಲ್ಲೆಲ್ಲೋ ಕೊರಗುತ್ತಿದ್ದಾನೆ ಏಕಲವ್ಯ,
ಮತ್ಸರದ ಪ್ರಪಾತ, ನೆನಪುಗಳು ಅಸ್ತಂಗತ
ಅಲ್ಲಾರೋ ಕೂಗಿದರು..
ಇವ ನಮ್ಮವಾ...
ಅಷ್ಟಮಂಗಲದ ಪ್ರಶ್ನೆಗೆ ಇಷ್ಟರಲ್ಲೇ ಉತ್ತರ ಸಿಕ್ಕಿತೇ.
ಆದರೆ..
ಅವರ್ಯಾರು...?
ಹಾವಿನೆಡೆಯ ನೆರಳು... ರಕ್ತ ರಂಗೋಲಿ.




(PC : http://imgs.abduzeedo.com/files/articles/intriguing-drawings/__VISIONS___by_Astral_Haze.jpg) 

Tuesday, January 26, 2016

ಮನಸ್ಸು ವ್ಯಾಕುಲಗೊಳ್ಳುತ್ತಿದೆ.

ಪ್ರಾಂತೀಯ ವ್ಯವಸ್ಥೆಯಿಂದ ಗಣತಂತ್ರ ವ್ಯವಸ್ಥೆಯ 'ಅಧೀನ'ಕ್ಕೊಳಪಟ್ಟು 67 ಸಂವತ್ಸರಗಳು ಕಳೆದು ಹೋದವು.  ನಮ್ಮದೇ ವ್ಯವಸ್ಥೆ, ನಮ್ಮದೇ ಆಳ್ವಿಕೆ.. ಪ್ರಗತಿಯ ಉತ್ತುಂಗಕ್ಕೇರುತ್ತೇವೆ ಎನ್ನುವ ಹಗಲುಗನಸಿನ ಬೆನ್ನತ್ತಿ ಮರುಭೂಮಿಯ ಪಯಣ ಮಾಡುತ್ತಾ ಹಿಂತಿರುಗಿ ನೋಡಿದಾಗ 6ದಶಕಗಳುರುಳಿಹೋದವು. ಆದರೆ ಪ್ರಗತಿ.... ಮರೀಚಿಕೆ.

ಬಾನೆತ್ತರದ ಕಟ್ಟಡಗಳು, ಮೋನೋ, ಮೆಟ್ರೋ ರೈಲುಗಳು, ಆಧುನಿಕ ಯುದ್ಧ ಸಲಕರಣೆಗಳು... ಊಹುಂ.. ನನ್ನ ಪ್ರಕಾರ ಇವೆಲ್ಲಾ ಪ್ರಗತಿಯ ಮಾನದಂಡಗಳಲ್ಲ.
ನಮ್ಮೂರಿನ ಕದಿರ ಇವತ್ತಿಗು ಬಡಕಲು ಎತ್ತುಗಳಲ್ಲಿ ಹೊಲ ಉಳುತ್ತಿದ್ದಾನೆ. ಹಟ್ಟಿಯ ರಾಜ ಇವತ್ತಿಗೂ ದಿನಗೂಲಿ ಪಡೆದು ಸಂತೆಗೆ ಕೈ ಚೀಲ ಹಿಡಿದು ಹೋಗುತ್ತಿದ್ದಾನೆ. ಸ್ವಂತ ಜಮೀನಿಲ್ಲದ ಸಾಬಯ್ಯ ಕಂಡವರ ಗದ್ದೆ ವಾರಕ್ಕೆ ಗೇಯ್ಮೆ ಮಾಡುತ್ತಿದ್ದಾನೆ... ಇವರ ಪ್ರಗತಿ ಯಾವಾಗ...?

ಬದುಕು ಕಳೆದುಕೊಂಡು ಅತ್ತ ಸಾಯಲೂ ಆಗದೇ, ಇತ್ತ ಬದುಕಲೂ ಆಗದೇ ಬದುಕುತ್ತಿದ್ದ ಇಂತಹವರಿಗಾಗಿ ಮೂಡಿಬಂದ ಆಶಾಕಿರಣ ಭಾರತದ ಸಂವಿಧಾನ.

ಭಾರತೀಯರಲ್ಲಿ ಜೀವನೋತ್ಸಾಹ ಮೂಡಿಸಿದ ಸಂವಿಧಾನ ನಿಜಕ್ಕೂ ಪ್ರಗತಿಯ ದಾರಿದೀಪವಾಗಬೇಕಿತ್ತು. ಆದರೆ ಉಳ್ಳವರು ಇಲ್ಲದವರ ನಡುವಿನ ಪರೋಕ್ಷ ಸಂಘರ್ಷ ನಿರಂತರವಾಗಿ ನಡೆಯುತ್ತಲೇ ಇದೆ. ಹಿಂದುಳಿದವರನ್ನು ಮುಖ್ಯವಾಹಿನಿಗೆ ತರಲು, ಸಮಾನತೆ ಸಾಧಿಸಲು ಕೊಟ್ಟ ಮೀಸಲಾತಿ ಏನಾಗಿದೆ....? ಊರ ಹೊರಗೆ"ಮೀಸಲು" ಹಟ್ಟಿ, ದೇವಾಲಯದ ಹೊರಗೆ "ಮೀಸಲು" ಜಾಗ, ಹಳ್ಳಿ ಹೋಟೆಲ್ ಗಳಲ್ಲಿ "ಮೀಸಲು"ಲೋಟ...

ಯಾವ ದೇಶದಲ್ಲಿ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಆಧಾರದ ಮೇಲೆ ಸಮಾಜ ನಿರ್ಮಾಣವಾಗಬೇಕಿತ್ತೋ ಅಲ್ಲಿ ಅಸಮಾನತೆ, ಅಸ್ಪೃಶ್ಯತೆ ತಾಂಡವವಾಡುತ್ತಿದೆ. ಜಾತಿ ಮತ ಪಂಥ ಧರ್ಮಗಳು ಮೇಲುಗೈ ಸಾಧಿಸಿವೆ.. ಹಸಿದವನಿಗೆ ಅನ್ನ ನೀಡುವುದೇ ಧರ್ಮ ಎನ್ನುವ ನೈಜ ಧರ್ಮ ಮರೆತು ಹೋಗಿದೆ.

ಭಾರತ ನನ್ನ ಧರ್ಮ, ಸಂವಿಧಾನ ನನ್ನ ಧರ್ಮ ಗ್ರಂಥ ಎನ್ನುವ
ಚಿಂತನೆ ಮರೆಯಾಗಿದೆ. ದೇಶದ ಭವಿಷ್ಯಕ್ಕೊಂದು ಮುನ್ನುಡಿ ಬರೆದ ಸಂವಿಧಾನ ದಿನವನ್ನು ಸಾರ್ಥಕಗೊಳಿಸಲು ಅಣಿಯಾಗಬೇಕಿದೆ.

ಇನ್ನಾದರೂ ಸಂವಿಧಾನವನ್ನು ಸರಿಯಾಗಿ ಓದಿಕೊಳ್ಳೋಣ....

Saturday, June 20, 2015

ನೀವೆ ಅನುಭವಗಳ ಅಗಾಧ ಅರಳೀಮರ..

ಸತ್ತವರೆಲ್ಲಾ ನಕ್ಷತ್ರಗಳಾಗ್ತಾರೆ ಅನ್ನೋ ಕಲ್ಪನೆಯೇ ಎಷ್ಟು ಚೆಂದ ಅಲ್ವಾ..?
ಯಾವುದೋ ನಕ್ಷತ್ರದೊಳಗೆ ಕೂತು ನನ್ನ ಮಗನ ಜೀವನ ಹಸನಾಗಲೀ ಅಂತ ಹಾರೈಸ್ತಿರೋ ನನ್ನಪ್ಪನಿಗೆ ನನ್ನೆಲ್ಲಾ ನುಡಿ.. ನನ್ನೆಲ್ಲಾ ನಡೆ.. ನನ್ನೆಲ್ಲಾ ಯಶಸ್ಸು ಅರ್ಪಣೆ..
ಜೂನ್ ಬಂತೂ ಅಂದ್ರೆ ಸಾಕು ಪೀಡಿಸಿ ಪೀಡಿಸಿ ಕಾಸು ಪಡೆದು ಪುಸ್ತಕ ತೆಗೆಸಿಕೊಳ್ಳುವಾಗ ನನ್ನ ಕಣ್ಣಲ್ಲಿದ್ದುದು ಸಂತಸ ಮಾತ್ರ.. ಆದರೆ ನಿಮ್ಮ ಜೇಬು ಅಳುತ್ತಿದ್ದುದು ನನಗೆ ಕಾಣಿಸುತ್ತಲೇ ಇರಲಿಲ್ಲ.. ನೀವು ಅದಾವುದನ್ನೂ ಹೇಳುತ್ತಲೂ ಇರಲಿಲ್ಲ.. ಕ್ಷಮಿಸಿ ಅಪ್ಪಾ.. ಆದರೆ ಅವತ್ತು ನೀವು ಕೊಡಿಸಿದ್ದ ಪುಸ್ತಕಗಳು ಮತ್ತದರ ಅನುಭವ ಇವತ್ತು ನನಗೆ ಅನ್ನು ನೀಡುತ್ತಿದೆ..
ನೀವು ಇಲ್ಲವಾಗಿಲ್ಲ ಅನ್ನೋದನ್ನ ನನಗೆ ನಂಬೋಕಾಗ್ತಿಲ್ಲ.. ನೀವು ಸದಾ ನನ್ನೊಡನೆ.. ಅದಕ್ಕೆ ನಿಮಗೊಂದು ಸಮಾಧಿ ಕಟ್ಟು ಅನ್ನುವ ಯಾರ ಮಾತನ್ನೂ ನಾನು ಕೇಳಿಲ್ಲ.. ನೀವೆ ಅನುಭವಗಳ  ಅಗಾಧ ಅರಳೀಮರ.. ನಿಮ್ಮೆದೆ ಮೇಲೊಂದು ಅರಳಿ ಗಿಡ ನೆಟ್ಟು ನಿಮ್ಮನ್ನು ಸ್ಮಾರಕವಾಗಿಸಲು ನನಗೆ ಮನಸಿಲ್ಲ.. ನೀವು ಬಿಟ್ಟ ಅನುಭವಗಳ ಬೇರುಗಳ ಆಸರೆ ಪಡೆದು ಬದುಕುತ್ತಿದ್ದೇನೆ.. ನೀವು ನಿರಾಕಾರ.. ನೀವು ಅಮೂರ್ತ..  ನೀವೇ ಚೈತನ್ಯ..
ಜನರನ್ನು ಮೆಚ್ಚಿಸೋಕಾಗಲ್ಲ… ನೀನು ಮೆಚ್ಚುವಂತೆ ಬದುಕು ಅಂತ ಹೇಳಿಕೊಟ್ಟ ನಿಮ್ಮದೇ ಮಾತಿನಂತೆ.. ನಿಮ್ಮದೇ ಕಲ್ಪನೆಯಂತೆ ಬದುಕು ಸಾಗಿಸುವ ಹಂಬಲದಲ್ಲಿ ಸಂಘಷದಲ್ಲಿ ಬದುಕು ಸಾಗಿಸುವುದೇ ಸಾಧನೆಯಾಗಿದೆ..
ಸತ್ತ ಕನಸುಗಳ ಮುಂದೆ ಬಿಕ್ಕಿ ಅತ್ತು ಬರಿದಾದ ಕಣ್ಣಾಲಿಗಳ ಕೊನೆ ಹನಿಯಲ್ಲೂ ನಿಮ್ಮದೇ ನೆನಪು.. ಮತ್ತೆ ಮತ್ತೆ ನೆನಪಾಗೋ ನಿಮಗಾಗಿ ಇದೊಂದು ಅಕ್ಷರ ನಮನ..


Tuesday, July 8, 2014

ಕುಬೇರನಿಗೊಂದು ಕವರ್ ಲೆಟರ್


ಗೆ.
ಶ್ರೀ ಕುಬೇರ
ಯಾವುದೋ ‘ಯುಗ’ದ ಸಿರಿವಂತ

ನಮಸ್ಕಾರ ಸ್ವಾಮಿ,

ನೀವು ಅದಾವುದೋ ಯುಗದಲ್ಲಿ ಈಗಿನ ತಿರುಪತಿಯ ತಿಮ್ಮಪ್ಪ ಅಲಿಯಾಸ್ ಶ್ರೀನಿವಾಸ ರವರಿಗೆ ಅವರ ಮದುವೆಯ ಸಮಯದಲ್ಲಿ ಸಾಲ ಕೊಟ್ಟಿದ್ರೀ ಅಂತಾ ಯಾರೋ ಹಿರಿಯರು ಬರೆದಿರೋದನ್ನ ಅಲ್ಲಿ ಇಲ್ಲಿ ನಾವು ಓದಿದ್ವಿ, ಅದೇನ್​ ನಿಜಾನೋ ಸುಳ್ಳೋ ಗೊತ್ತಿಲ್ಲ... ಪ್ರಶ್ನೆ ಮಾಡ್ಬೇಡಿ ಅಂತಾ ದೊಡ್ಡೋರ್ ಹೇಳ್ಬಿಟ್ಟಿದ್ದಾರೆ.. ನೀವು ಕೊಟ್ಟಿರೋದಕ್ಕೂ ಅವರು ತೆಗೆದುಕೊಂಡಿರೋದಕ್ಕೂ ಯಾವುದೇ ಪತ್ರಗಳಿಲ್ಲ.  ಆ ಸಾಲ ತೀರಬೇಕು ಅಂದ್ರೆ  ಇಡೀ ಕಲಿಯುಗ ಮುಗಿಯುವವರೆಗೂ ಬಡ್ಡಿ ಕಟ್ಟಬೇಕು ಅಂತಾ ಹೇಳಿದ್ರಂತೆ. ಆದ್ರೆ ತಿಮ್ಮಪ್ಪ ಮಾಡಿರೋ ಸಾಲಕ್ಕೆ ನಮ್ಮಪ್ಪ ಯಾಕ್ ಬಡ್ಡಿ ಕಟ್ಟಬೇಕು ಅನ್ನೋದು ನಮ್ಮ ಪ್ರಶ್ನೆ.. ಇರ್ಲಿ.. ಇಡೀ ಕಲಿಯುಗ ಮುಗ್ಯೋವರ್ಗೂ ಬಡ್ಡಿ ಕಟ್ಟಬೇಕು ಅಂದ್ರೆ ನೀವು ಕೊಟ್ಟಿರೋ ಸಾಲ ಎಷ್ಟು, ....?ಎಷ್ಟು ಪರ್ಸೆಂಟ್ ಬಡ್ಡಿ...? ಈಗ ಬಡ್ಡಿ ದಂಧೆ ಮಾಡೋದು ಈಗಿನ ಕಾನೂನಿನ ಪ್ರಕಾರ ಅಪರಾಧ ಸ್ವಾಮಿ.. 
ಹಾಗಾಗಿ ಇದುವರೆಗೂ ನಿಮಗೆ ಸಂದಾಯವಾಗಿರೋ ಹಣ ಎಷ್ಟು, ಇನ್ನೂ ಎಷ್ಟು ಸಂದಾಯವಾಗಬೇಕು, ಈಗ ನಿಜವಾಗ್ಲೂ ಹಣ ನಿಮಗೆ  ಸಂದಾಯವಾಗ್ತಾ ಇದ್ಯಾ ಅನ್ನೋ ಮಾಹಿತಿಯನ್ನು ‘ಮಾಹಿತಿ ಹಕ್ಕು ಅಧಿನಿಯಮ’ ದ ಪ್ರಕಾರ ನೀಡಬೇಕು ಅಂತಾ ಆಗ್ರಹಿಸ್ತಾ ಇದ್ದೀನಿ.
(ಚಿಕ್ಕ ವಯಸ್ಸಿನಲ್ಲಿ ಮನೆಯ ದೊಡ್ಡವರ ಆಗ್ರಹಕ್ಕೆ ಕಟ್ಟುಬಿದ್ದು ಎರಡು ಸಲ ‘ಕೇಶದಾನ’ ಮಾಡಿರೋ ನೈತಿಕ ಅಧಿಕಾರದಿಂದ ಪ್ರಶ್ನಿಸ್ತಿದ್ದೇನೆ)

ಇಂತಿ
ಭವ್ಯ ಭಾರತದ ಪ್ರಜೆ

Saturday, July 5, 2014

ನನ್ನೊಳಗಿರೋ ‘ದೇವರು’..

ನನ್ನೊಳಗಿರೋ ದೇವರು ನಿರಾಕಾರ... ಅವನಿಗೆ ನಾನು ಗುಡಿ ಕಟ್ಟುವಷ್ಟು ದೊಡ್ಡವನಲ್ಲಾ ...
ನನ್ನೊಳಗಿರೋ ದೇವರು ಸಿರಿವಂತ... ಅವನಿಗೇ ದಕ್ಷಿಣೆ ನೀಡುವಷ್ಟು ದೌಲತ್ತು ನನಗಿಲ್ಲ...
ನನ್ನೊಳಗಿರೋ ದೇವರು ನನ್ನಷ್ಟೇ ಆತ್ಮೀಯ... ಪೂಜಿಸು ಅಂತಾ ಹೆದರಿಸೋದಿಲ್ಲ....

Tuesday, July 1, 2014

ಎರಡು ಹಿಡಿ ಅಕ್ಕಿ... ನಾಲ್ಕು ತುಪ್ಪದ ದೀಪ...



ಬೆಳಿಗ್ಗೆ  ಬೆಳಿಗ್ಗೆಯೇ ಯಾಕೋ ಶಂಕ್ರಣ್ಣನ ಹೋಟೆಲ್ ಕಾಫಿ ಕುಡಿಬೇಕು ಅಂತಾ ಅನ್ನಿಸಿದ್ದೇ ತಡಾ ಕೊರಗ ನೇರವಾಗಿ ಶಂಕರಣ್ಣನ ಹೋಟೆಲ್ ಮುಂದೆ ಸ್ಥಾಪಿತನಾಗಿಬಿಟ್ಟಿದ್ದ... ಪ್ಲಾಸ್ಟಿಕ್ ಲೋಟದ ಅಂಚು ಸವರುತ್ತಾ.. ಶಂಕರಣ್ಣ ಕೊಡೋ ಕಪ್ಪು ಕಾಫಿಗಾಗಿ ಕಾಯ್ತಾ ಕೂತಿದ್ದ... ಅಷ್ಟರಲ್ಲಿ ಶಂಕ್ರಣ್ಣನ ಹೆಂಡತಿ ಮಾದೇವಮ್ಮ ಟಿವಿ ಹಾಕಿ ಊರಿಗೇ ಕೇಳ್ಸೋ ಹಾಗೆ ಸವಂಡ್ ಜಾಸ್ತಿ ಮಾಡಿ ಒಳಗಡೆ ಹೋದ್ರು... ಕಾಲ ಕಳೆಯೋಕೆ ಕೊರಗ ಟಿವಿ ಕಡೆ ಕಣ್ಣು ಹಾಯಿಸಿದ್ದ....
‘ನಮಸ್ಕಾರ, ಹೇಳಿಮಾ ಏನ್ ನಿಮ್ಮ ಸಮಸ್ಯೆ...?’ ಟಿವಿಯಲ್ಲಿ ಜ್ಯೋತಿಷಿಯೊಬ್ಬರು ಮಾತಾಡ್ತಾ ಇದ್ರು... ಅವರನ್ನ ನೋಡ್ತಾ ಇದ್ದ ಹಾಗೇ ಕೊರಗನ ಕಿವಿ ನೆಟ್ಟಗಾದವು....
‘ಸ್ವಾಮಿ, ನಮ್ ಮಗ ಯಾಕೋ ಮಂಕು ಹಿಡಿದಂಗಾಗ್ಬಿಟ್ಟಿದೆ.... ಆಮೇಲೆ.........’ ಪಾಪ ಇನ್ನೂ ಏನೇನೋ ಸಮಸ್ಯೆ ಹೇಳ್ಕೊಳ್ತಲೇ ಇದ್ಲು ಆಕೆ... ಅಷ್ಟರಲ್ಲಿ ಶಂಕ್ರಣ್ಣ ಕೊಟ್ಟ ಕಾಫಿ ಕೊರಗನ ಕೈಲಿದ್ದ ಲೋಟ ಸೇರಿತ್ತು... ಸೊರ್​್್​್​್​.... ಅಂತಾ ಸದ್ದು ಮಾಡ್ತಾ ಕಾಫಿ ಹೀರ್ತಾ ಇದ್ದ...
‘ಹೌದೇ,, ನೋಡಿಮಾ... ಎಡಗೈಯಲ್ಲಿ ಎರಡು ಹಿಡಿ ಅಕ್ಕಿ ತೊಗೊಂಡು... ಅನ್ನು ಮಣ್ಣಿನ ಮಡಿಕೇಲಿ... ಬಿಸಿ ನೀರಿಗೆ ಅರಿಶಿನ ಹಾಕಿ... ಅನ್ನ ಮಾಡಿ... ಮೂರು ದಾರಿ ಕೂಡೋ ಕಡೆ ಅದನ್ನ ಇಟ್ಟು ಹಿಂತಿರುಗಿ ನೋಡದೇ ಬಂದುಬಿಡಿ... ಆಯ್ತೆ... ಮನೆಗೆ ಬಂದು 4 ತುಪ್ಪದ ದೀಪ ಹಚ್ಚಿ... ಎಲ್ಲಾ ಒಳ್ಳೇದಾಗುತ್ತೆ...’ ಜ್ಯೋತಿಷಿಯ ಮಾತು ಮುಗಿದಿತ್ತು...
ಕೊರಗ ಸುಮ್ಮನೆ ಒಂದ್ಸಲ ನಕ್ಕು ಸುಮ್ಮನಾದ.... ಗಂಜಿ ಮಾಡೋಕೂ ಅಕ್ಕಿ ಇಲ್ಲಾ ಅಂತಾ ಅವನ ಹೆಂಡತಿ ಮಾದಿ ಹೇಳಿದ್ದು ನೆನಪಾಗಿ ಅಕ್ಕಿ ಸಾಲ ತರೋಕೆ ಅಂತಾ ಹೊರಟ.... ಆ ಜ್ಯೋತಿಷಿ ಇನ್ನೊಬ್ಬರಿಗೆ ಇನ್ನೊಂದು ಸಮಸ್ಯೆಗೆ ‘ಪರಿಹಾರ’ಹೇಳ್ತಾ ಇದ್ರು...