Saturday, June 14, 2014


ಧರೆಗೆ ಬರುವ ಮೊದಲೇ.....
budha
                 
ಜಗತ್ತು ನಿನ್ನನ್ನು ಜ್ಞಾನಿ ಅಂತಿದೆ.. ತಿಳಿದವನು ಅಂತಿದೆ... ಸತ್ಯದನ್ವೇಷಕ ಅಂತಿದೆ... ಇದೆಲ್ಲಾ ಇರಬಹುದು.. ಆದರೆ ನಿನ್ನನ್ನೂ ದೈವತ್ವಕ್ಕೇರಿಸಿಬಿಟ್ಟರಲ್ಲಾ ಮಗೂ...
ಈ ತಾಯಿಯ ಮುದ್ದು ಕಂದ ನೀನು.. ಜಗತ್ತಿನ ಯಾವ ತಾಯಿಯೂ ನನ್ನಷ್ಟು ಹೆಮ್ಮೆಪಟ್ಟಿರಲಾರಳು.. ನೀನು ನನ್ನ ಗರ್ಭದಲ್ಲಿ ಟಿಸಿಲೊಡೆದ ಕ್ಷಣದಿಂದ ಒಬ್ಬ ಹೆಣ್ಣಾಗಿ ಒಂಭತ್ತು ಮಾಸಗಳು ನಾನು ಅನುಭವಿಸಿದ ಸಂತೋಷ... ಹೆಮ್ಮೆ... ನೋವು... ತೃಪ್ತಿ.. ಮತ್ಯಾರಿಗೂ ಸಾಧ್ಯವಿಲ್ಲ...
ನಿನ್ನ ಪುಟ್ಟ ಕಾಲುಗಳಿಂದ ನನ್ನ ಹೊಟ್ಟೆಯನ್ನು ಒದೆಯುವಾಗ ‘‘ಇವನಿಗೆಷ್ಟು ಧಾವಂತ ಹೊರಬರಲು ’’ ಅಂತಿದ್ದೆ... ಆದರೆ ಈಗ ನನಗೆ ಅರಿವಾಗ್ತಾ ಇದೆ.. ನನ್ನ ಹೊಟ್ಟೆಯನ್ನೊದ್ದು ಬಂದ ನಿನೆಗೆ ಈ ಜಗದ ಅಜ್ಞಾನದ, ಮೌಢ್ಯತೆಯ ಕತ್ತಲೆಯನ್ನು ಒದೆಯುವ ಧಾವಂತವಿತ್ತು ಅಂತಾ... ಪ್ರಶ್ನಾತೀತವಾಗಿದ್ದ ಈ ಸಮಾಜದಲ್ಲಿ ಅರಿವಿನ ಹರಿಗೋಲು ಹಿಡಿದು ಸತ್ಯದ ಅನ್ವೇಷಣೆಗೆ ತೊಡಗೋ ನಿನ್ನಂತ ಒಬ್ಬ ನಾವಿಕ ಈ ದೇಶಕ್ಕೆ ಬೇಕಿತ್ತು ಮಗು...
ಆ ನಾವಿಕನ ಭಾವಲಹರಿ ಹರಿಯಲು ನಾನು ಕಾರಣಳಾದೆ ಎಂದರೆ ನಾನೆಷ್ಟು ಭಾಗ್ಯವಂತೆ ಅಲ್ವಾ...? ಇತಿಹಾಸದ ಪುಟಗಳಲ್ಲಿ ನಿನ್ನ ಹೆಸರಿನೊಂದಿಗೆ ಈ ಅಮಾಯಕಳ ಹೆಸರೂ ತಳುಕು ಹಾಕಿಕೊಂಡಿದೆಯೆಂದರೆ ನನ್ನ ಪುಣ್ಯದ ಫಲ ಅದು...
ನಿನ್ನಂತಹ ಅಗಾಧವಾದ ಚೈತನ್ಯವನ್ನು ನನ್ನ ಗರ್ಭದಲ್ಲಿಟ್ಟುಕೊಳ್ಳುವ ಶಕ್ತಿ ಅದೆಲ್ಲಿಂದ ಬಂತೋ ನಾನರಿಯೇ... ಬ್ರಹ್ಮಾಂಡದ ಸತ್ಯವನ್ನೆಲ್ಲಾ ಮಾಂಸದ ಮುದ್ದೆಯನ್ನಾಗಿಸಿ ನನ್ನೊಳು ಹೊತ್ತಂತಾಗಿತ್ತು.. ಮುಂದೊಂದು ದಿನ ನೀನು ಈ ಮಟ್ಟಿಗೆ ಪ್ರಜ್ವಲಿಸುತ್ತೀಯೆ ಎಂದು ತಿಳಿದಿದ್ದರೆ, ಆ ಭಯದ ಪ್ರಜ್ಞೆಯಲ್ಲಿಯೇ ನಾನು ಏನಾಗುತ್ತಿದ್ದೆನೋ ಗೊತ್ತಿಲ್ಲಾ..

ನನ್ನೆಲ್ಲಾ ಅಂತಃಸತ್ವವನ್ನೆಲ್ಲಾ ಹೀರಿಬಿಟ್ಟೆಯಲ್ಲಾ ನೀನು.... ಗರ್ಭದೊಳಗಿರುವಾಗ ನಿನ್ನ ಚಲನೆಯೇ ನನಗೆ ಆ ಮಟ್ಟಿನ ಆಹ್ಲಾದಕರ ಭಾವ ನೀಡುತ್ತಿತ್ತು... ಸಾವಿರಾರು ವರ್ಷಗಳ ಕಾಲ ಚಿರವಾಗಿರುವ ಮಗನೊಬ್ಬ ನನ್ನೊಳು ಆವೀರ್ಭವಿಸಿದನೆಂದು ನೆನೆದರೆ ನನ್ನೊಳಗೆಂತದೋ ಮಿಂಚಿನ ಸಂಚಾರ.. ಜಗತ್ತಿಗೇ ಗೊತ್ತು ಈ ಮಹಾಪುರುಷನ ತಾಯಿ ನಾನೆಂದು... ಆದರೆ ಈ ಜಗತ್ತಿನ ಮುಂದೆ ಒಮ್ಮೆಯೂ ನಿನ್ನಿಂದ ಅಮ್ಮಾ ಎನಿಸಿಕೊಳ್ಳಲಿಲ್ಲಾ...
ಅದೆಲ್ಲಿತ್ತು ಮಗು ನಿನ್ನೊಳು ಅಂತಾ ಜ್ಞಾನ.. ಜಗದ ಸೊಗಸನ್ನು ಅರಿಯದ ನನಗೆ ಗರ್ಭದಲ್ಲಿಯೇ ಜ್ಞಾನದ ಸೊಗವನ್ನುಣಿಸಿದವನು ನೀನು.. ಲುಂಬಿಣಿಯಲ್ಲಿ ನಿನ್ನ ಹೆತ್ತ ದಿನದಿಂದ ನನ್ನ ದೇಹದ ಅವಿಭಾಜ್ಯ ಅಂಗವೇ ಕಳೆದು ಹೋಯಿತೇನೋ ಎನಿಸುತ್ತಿತ್ತು... ಆದರೆ ನಂತರವೇ ನನಗೆ ತಿಳಿದಿದ್ದು.. ನನ್ನ ದೇಹದ ಅಣು - ಅಣುವಿನ ಸತ್ವವನ್ನೆಲ್ಲಾ ಹೊತ್ತು ಭೂಮಿಗೆ ಬಂದವನು ನೀನೆಂದು..
‘‘ಧರೆಗೆ ಬರುವ ಮೊದಲೇ ನನ್ನೊಳು ದಮ್ಮವನ್ನು ಬಿತ್ತಿದವನು ನೀನು’’
ನಾನು ಇಲ್ಲವಾಗಿಲ್ಲ ಮಗೂ.. ನಿನ್ನಲ್ಲಿ.. ನಿನ್ನೊಳಗೆ.. ನಿನ್ನೊಡನೆ ಈ ಪಾಮರಳ ಹೆಸರೂ ಚಿರವಾಗಿ ಉಳಿದಿದೆ.. ಎಂದೂ ಆರದ ಬೆಳಕಿನಡಿಯ ನೆರಳಿನಂತೆ. ಸಾಂಚಿಯಲ್ಲಿ ಕೊನೆಯ ಭೋದನೆ ನೀಡಿ ಅರೆಗಣ್ಣಲ್ಲಿ ಮಲಗಿದ ನಿನ್ನ ಕಂಡರೆ.. ‘‘ಅಯ್ಯೋ ನನ್ನ ಕಂದ ಈ ಜಗತ್ತಿನ ಮತ್ಯಾವ ಸಮಸ್ಯೆಗೆ ಪರಿಹಾರ ಕಾಣಲು ವಿಶ್ರಮಿಸುತ್ತಿರುವನೋ.. ಸೆರಗ ಅಂಚಲ್ಲಿ ಗಾಳಿ ಬೀಸಲೇ..’’  ಎಂದೆನಿಸುತ್ತದೆ.. ‘‘ನಿನ್ನ ತಲೆಯನ್ನು ಮಡಿಲಲ್ಲಿಟ್ಟು ಲಾಲಿ ಹಾಡಲೇ..?’’ ಎಂದೆನಿಸುತ್ತದೆ.  ಅಜ್ಞಾನದ ಕಿಚ್ಚನ್ನು ದಮ್ಮದ ತಂಗಾಳಿಯಲ್ಲಿ ಆರಿಸಿದವನಿಗೆ ಗಾಳಿ ಬೀಸಲು ನಾನೆಷ್ಟರವಳು.. ಭೂಮಿ ತೂಕದ ನಿನಗೇ ಮಡಿಲೊಡ್ಡಿರುವ ನಾನೆಂತ ಮರುಳೆ ಎಂದು ನಗು ಬರುತ್ತದೆ..
ಈ ಹುಚ್ಚು ತಾಯಿಯ ಮನದ ಬಯಕೆಯಿದು..
‘‘ಮತ್ತೇ ಹುಟ್ಟಿ ಬಾ ಕಂದ.. ಈ ತಾಯಿಯ ಗರ್ಭದಲ್ಲಿ....’’

Sunday, June 8, 2014



ಕೊರಗನ ಕೊರಗು....

ನೆನ್ನೆ ದಿನ ಮಾದೇವಪ್ಪಾರ ಮನೆ ಟೀವಿಲೀ ಆ ಸುದ್ದಿ ನೋಡ್ದಾಗಿಂದ ಕೊರಗ ರಾತ್ರಿಯೆಲ್ಲಾ ನಿದ್ದೆಯಿಲ್ಲದೇ ಒದ್ದಾಡ್ತಿದ್ದ... ಅವನ ಹೆಂಡ್ರು ಸಾಕಿ ‘ಇದ್ಯಾಕಿಂಗ್ ನುಲಿತಿದ್ದೀ... ಸುಮ್ಕ ಮಲ್ಕಂಡಿಯೋ ಹೆಂಗೇ... ವತ್ತಾರಿಕೆ ಮುಯ್ ಆಳಿಗೋಗ್ಬೇಕು..’’ ಅಂತಾ ಸಾವಿರ ಸಲ ಒಟಗುಟ್ಟಿದ್ರೂ ಕೊರಗನ ಕೊರಗು ನಿಂತಿರ್ಲಿಲ್ಲಾ. ಬೆಳಿಗ್ಗೆ ಹೊತ್ತುಟ್ದಾಗಿಂದ್ಲೂ ಅದೇ ಯೋಚನೆ... ಕೆರೆಕಡೀಕ್ ಹೋಗ್ ಬಂದು ರಾಜಣ್ಣನ ಹೋಟ್ಲು ತಾವ ಕೂತ್ಕಂಡು ಪ್ಲಾಸ್ಟಿಕಿನ್ ಲೋಟದಲ್ಲಿ ಅರ್ಧ ನೀರ್ ಕಾಪಿ ಕುಡಿವಾಗ್ಲೂ ಅವನ ಸಂಕಟ ಕಮ್ಮಿಯಾಗಿರ್ಲಿಲ್ಲ... ವೊತ್ ವೊತ್ತಾರೆನೇ ಇವ್ನ ಹಾಳ್ ಮುಖ ನೋಡಕ್ಕಾಗ್ದೇ ರಾಜಣ್ಣನೇ ಕೇಳ್ದಾ.. ‘‘ಇದ್ಯಾಕ್ಲಾ ಕೊರ್ಗ... ಇಂಗ್ ಇದ್ದಿಯೇ.. ಮೊನ್ನೆ ದಿನ ಕಳ್ಳೀಪಾಳ್ಯದ್ ಪಳೇಕಮ್ಮನ ಜಾತ್ರೇಲ್ ತಿಂದ್ ಬಾಡುಇನ್ನೂ ಕರಗಿಲ್ಲ ಅನ್ನಂಗದೇ....’’ ರಾಜಣ್ಣಂಗೆ ತಮಾಷೆ... ಇಲ್ಲಿ ಕೊರಗಂಗೆ ಪ್ರಾಣ ಹೋದಂಗಾಯ್ತಾದೆ... ಕೈಲಿದ್ದ ಕಾಪೀ ಲೋಟದಲ್ಲಿದ್ದ ಕೊನೆ ಗುಟುಕನ್ನ ಸೋರ್ ಅಂತಾ ಸದ್ ಮಾಡಿ ಕುಡ್ದು... ‘‘ಇಲ್ ಕಣ್ ತಗಳಣೋ.. ಅದ್ಯಾಕಂಗಂತೀರಿ...’’ ಅಂದ
‘‘ ಮತ್ಯಾಕ್ ಇಂಗ್ ಅಳ್ಳೆಣ್ಣೆ ಕುಡ್ದೋನಂಗ್ ಮಕ ಮಾಡ್ಕಂಡಿದ್ದಿಯೋ...?’’
‘‘ಇದೇನ್ ಇಂಗ್ ಕೇಳಿರಿ... ನೆನ್ನೆ ಜಿನ ಟಿಬಿ ನೋಡ್ಲಿಲ್ವರಾ....?’’
‘‘ದಿನಾ ನೋಡ್ತೀವಲ್ಲೋ.. ನೆನ್ನೆ ಏನ್ ಸ್ಪೆಷಲ್ಲು..’’
‘‘ಅದೇ ಕಣಣ್ಣೋ... ಅದ್ಯಾವುದೋ ಓರ್ನಾಗೇ.. ಇಂಗ್ ಮುಟ್ಟುಸ್ಕೊಳ್ದೇ ಇರೋರ್ನ ಮುಟ್ಟುಸ್ಕೊಳ್ಳಂಗ್ ಆಗಬೇಕು ಅಂತಾ ಬುದ್ಯೋರೆಲ್ಲಾ ಉಪ್ವಾಸ ಕುತ್ಕಂಡವ್ರಂತೆ...’’
‘‘ಅಲಾ ಬಡ್ಡೈದ್ನೆ.. ಇಷ್ಟೋಂದ್ ವಿಷ್ಯಾ ತಿಳ್ಕಳಂಗಾದ್ಯಾ...? ಅದ್ಕೇನಿವಾಗ..’’
‘‘ಏನಣ್ಣಾ.. ನಮ್ಗೋಸ್ಕರ ಬುದ್ಯೋರ್ ಹಸ್ಕಂಡಿದ್ರೆ ಸಿವ ಮೆಚ್ಚಾನಾ.. ನಮಗ್ ಒಳ್ಳೆದಾದದಾ... ಅವ್ರು ಹಸ್ವಿನ್ ಶಾಪ ನಮಗ್ ತಟ್ಟದೇ ಇದ್ದಾದ... ಇದ್ಯಾಕೋ ಸರಿ ಕಾಣ್ವಲ್ದು...’’ ತಲೆ ಬಗ್ಗಿಸಿ ನೆಲ ತೋಯಿಸ್ತಿದ್ದ ಕೊರಗನ ಕಣ್ಣೀರು ರಾಜಣ್ಣಂಗೆ ಕಾಣ್ಲೇ ಇಲ್ಲಾ... ಅವನಾಗ್ಲೇ ಗಿರಾಕಿಗಳ ಜೊತೆ ಮಾತಾಡ್ತಾ ಇದ್ದ... ಕೊರಗನ ಸಂಕಟ ಇನ್ನೂ ಜಾಸ್ತಿಯಾಗಿ... ಏನೋ ನಿರ್ಧಾರ ಮಾಡ್ದೋನಂಗೆ ಹಟ್ಟಿಗೋಗಿ.. ಕೈಕಾಲು ಮುಖ ತೊಳ್ಕಂಡು ಅಲ್ಲೇ ಬೇಲಿ ಪಕ್ಕದಲ್ಲಿ ಬಿಟ್ಟದ್ದ ಎರಡು ಕೆಂಪ್ ದಾಸ್ವಾಳದ ಹೂ ಕಿತ್ಕೊಂಡು ಆಂಜನೇಯನ ದೇವಸ್ಥಾನದ ಬಾಗಿಲಿಗ್ ಬಂದು ,
‘‘ಐನೋರೆ... ಐನೋರೆ... ತಗಳೀ.. ಯಾಕೋ ಮನಸಿಗ್ ಹಿಂಸೆ ಆಗ್ತಾದೆ... ಸ್ವಾಮಿಗ್ ಒಂದ್ ಪೂಜೆ ಮಾಡಿ... ಅಂಗ್ ಈ ಹನ್ನೊಂದ್ ರುಪಾಯಿ ತಪ್ಪು ಕಾಣ್ಕೆ ಒಪ್ಪುಸ್ಕಳಿ...’’ ಅಂತಾ ಬಾಗ್ಲಲ್ ಕೂತ್ಕಂಡು ಹೊಸ್ತಿಲ ಮೇಲೆ ಹೂವು ಹನ್ನೊಂದ್ ರೂಪಾಯಿ ಇಟ್ಟ... ಐನೋರ್ ಬಂದು ನೀರ್ ಚುಮುಕಿಸಿ ಆ ಹೂವು... ಹನ್ನೊಂದ್ ರೂಪಾಯಿಯನ್ನ ‘ಪವಿತ್ರ’ಗೊಳಿಸಿ ಒಳಗಡೆ ತೊಗೊಂಡ್ರು... ಗರ್ಭಗುಡಿಯಲ್ಲಿದ್ದ ಆಂಜನೇಯ ‘ಅಸ್ಪೃಶ್ಯತೆ ನಿವಾರಣೆ ಆಯ್ತು..’’ ಅಂತ ನಕ್ಕಂಗಾಯ್ತು... ಕೊರಗ ದೇವಸ್ಥಾನದ ಬಾಗಿಲಲ್ಲಿ ಕೂತೇ ಇದ್ದ... ಪ್ರಗತಿಪರ ಸ್ವಾಮಿಗಳು ಬೀದರ್ ನಲ್ಲಿ ಅಸ್ಪೃಶ್ಯತೆ ನಿವಾರಣೆಗಾಗಿ ಉಪವಾಸ ಕೂತಿದ್ರು... ದಿನಾ ಒಪ್ಪೊತ್ತು ಊಟ ಮಾಡೋ ಕೊರಗನ ಮಗ ಸಣ್ಣ... ಸಣ್ಣಗೆ ಅಳ್ತಲೇ ಇದ್ದ...

Friday, April 25, 2014

ಭೂಮಿ ಬಿರುಕು ಬಿಟ್ಟು... ಕಾಲಿಗೆ ಮುಳ್ಳು ತಾಗಿ ರಕ್ತ ಸೋರುತ್ತಿದ್ದರೂ ನೆಲವನ್ನು ನೋಡದ ರೈತ ಆಕಾಶವನ್ನೇ ದಿಟ್ಟಿಸುತ್ತಿದ್ದ... ಮಳೆ ಬರಬಹುದು ಅಂತಾ...
ನಾನೂ ಹಾಗೆಯೇ...
ಎಷ್ಟೇ ಕಷ್ಟಗಳಿದ್ದರೂ ಆತ್ಮವಿಶ್ವಾಸದಿಂದ ದಿನ ನೂಕುತ್ತಿದ್ದೇನೆ..
ಯಾಕಂದ್ರೆ.. ನಾನೂ ಒಬ್ಬ ರೈತ..
ಕನಸುಗಳನ್ನು ಬೆಳೆಯುವವನು...

Thursday, February 4, 2010

ಅವಳು ಮತ್ತು ಮಳೆ

ಅವಳು ಮತ್ತು ಮಳೆ



ಕಿಲಕಿಲನೆ ನಗುತ್ತಿದ್ದವಳನ್ನು
ಅದಾಗ ತಾನೇ ಮುಗಿಲ ಮಾಡಿನಿಂದ
ಸುರಿದ ಮಳೆ ಹನಿ ಪುಳಕಿತಗೊಳಿಸಿತ್ತು..



ಅವನು ಬರುವ ಹಾದಿ ಕಾದು ಕಾದು

ಕನವರಿಸಿ ನಿಂತ ಕಣ್ಣುಗಳಿಗೆ
ಸ್ವಾತಿ ಹನಿಯ ಸಿಂಚನ,
ಇರುಳಿಡೀ ಸುರಿದ ಮಳೆಯಲ್ಲಿ

ಕಟ್ಟಿಕೊಂಡ ಕನಸುಗಳಿಗೆ ಮಾಘಸ್ನಾನ ...




ಕಳೆದ ಸ್ವಾತಿಯಲ್ಲಿ ಅವಳೊಡನೆ ಅವನಿದ್ದ

ಕಟ್ಟಿಕೊಂಡ ಕನಸುಗಳಿದ್ದೋ, ಹಾಡಿಕೊಂಡ ರಾಗಗಳು,
ಎಂದಿಗೂ ಮುಗಿಯದ ಅವರೇ ಬರೆದುಕೊಂಡ
ಹಾಡುಗಳಿದ್ದೋ ,
ಅದೆಷ್ಟೋ ಹನಿಗಲೊಳಗೆಬೆರೆತು ಹೋದ

ಮಾತುಗಳ ಮಾಲೆಗಲಿದ್ದೋ,
ಆದರೀಗ ..........


ಸ್ವಾತಿಯ ಪ್ರೀತಿಗೆ ಚಿಗುರೊಡೆದ
ಅಣಬೆಯಾ ನೆರಳಲಿ ಕಳೆದ ಕ್ಷಣಗಲಿದ್ದೋ ...
ತು೦ತುರು ಸೋನೆಯಲ್ಲಿ ಎಳೆ ಮಾವಿನ ಮರದಡಿ ನಿಂತು
ತಲೆ ನೇವರಿಸಿ "ನಾನಿದ್ದೇನೆ" ಎಂದಾಗ ಅವನಿದ್ದ,

ಆದರೀಗ .......


ಬಯಲಲ್ಲಿ ನಿಂತು ಧೋ ಎಂದು

ಸುರಿವ ಮಳೆಯಲ್ಲಿ ತುಟಿ ತೆರೆದು
ಹನಿ ಆಸ್ವಾದಿಸುವಾಗ ಅವನಿದ್ದ ....

ಮತ್ತೆ ಬರುವೆನೆಂದು
ಕಣ್ಣಲ್ಲಿ ಕಣ್ಣಿಟ್ಟು , ಕೆನ್ನೆ ತಟ್ಟಿ ಹೇಳಿ ಹೋಗುವಾಗ
ಆ ನೆನಪುಗಳೊಟ್ಟಿಗೆ ಅವನಿದ್ದ ....


ಶ್ರಾವಣದ ಆ ದಿನ ಹಸೆ ಮನೆಯಲ್ಲಿ

ಕೂತು ತಾಳಿ ಕಟ್ಟಿಸಿಕೊಂಡ ಕ್ಷಣದಲ್ಲಿ

ಪಕ್ಕದಲ್ಲಿದ್ದ ಮತ್ಹೊರ್ವನ ಮುಖದಲ್ಲಿ

ಅವನ ನೆನಪೂ ಇರಲಿಲ್ಲ .....

ಇದ್ದದ್ದು.............

ಮತ್ತೊಂದು ಮಾಘಸ್ನಾನಕ್ಕೆ ಮೈ ತೆರೆದು ನಿಂತ ಇಳೆ

ಹನಿಯೊಡನೆ ಕಣ್ಣೀರು ಬೆರೆಸುತ್ತಾ ನಿಂತ

ಅವಳು ಮತ್ತು ಮಳೆ......

Wednesday, February 3, 2010

Tuesday, October 13, 2009

ಕಾಡು ಮಲ್ಲಿಗೆ

ಕಾಡು ಮಲ್ಲಿಗೆ

ಕಾಡು ಮಲ್ಲಿಗೆ ಹೂ

ಕಾದಿರುವುದು ನಿನಗಾಗಿ

ತುರುಬನೇರುವ ಬಯಕೆಯದಕೆ

ನಿನ್ನ ಹಾದಿ ಕಾಯುತ್ತಾ

ಎದೆಯ ಗೂಡಲ್ಲಿ ಬಚ್ಚಿಟ್ಟಿರುವೆ

ದುಂಬಿಗಳ ಭಯಕ್ಕೆ........

Monday, October 12, 2009

ಕನಸುಗಳು

ಕಳೆದು ಹೋದ ಕನಸುಗಳು













ಕಳೆದುಹೋಗಿವೆ ಕನಸುಗಳು
ಕಲ್ಪನೆಯ ರಾತ್ರಿಯಲ್ಲಿ
ಕನವರಿಸಿ ನಿದ್ದೆಯಿಂದೆದ್ದ
ಮುಂಜಾವಿನ ಮಂಜಿನಲ್ಲಿ
ನಿನಗಾಗಿ ಕಾದ ಸಮಯದ ಸಮೀಪದಲ್ಲಿ ........

ಕಳೆದುಹೋಗಿವೆ ನನ್ನೆಲ್ಲಾ ಕನಸುಗಳು
ವ್ಯಾಪಾರದ ಹಂಗಿನಲ್ಲಿ
ವ್ಯಾಮೋಹದ ಗುಂಗಿನಲ್ಲಿ
ಒಲವು ಚೆಲುವುಗಳ ಸಮ್ಮೇಳನದಲ್ಲಿ
ಕಳೆದುಕೊಂಡ ಪದಗಳ
ಹುಡುಕಾಟದಲ್ಲಿ.

ಮೋಡ ಮಳೆ ಸುರಿಸುವ ಆತುರದಲ್ಲಿ
ನೆನೆದು ನಡುಗುತ್ತಾ ಸನಿಹ ನಿಂತ ಕ್ಷಣದಲ್ಲಿ
ಮಾತಿಗಾಗಿ ತಡಕಾಡುವಾಗ
ಸಿಕ್ಕ ಎರಡೇ ನಿಮಿಷವನ್ನು ಮೌನದಲ್ಲಿ
ಕಳೆದ ಕ್ಷಣದಲ್ಲಿ
ಕಟ್ಟಿಕೊಂಡ ಕನಸುಗಳು ಕಳೆದೆ ಹೋಗಿವೆ
ಜಗದ ಜಂಜಾಟದಲ್ಲಿ.

ಕಳೆದು ಹೋಗುವ ಭಯದಲ್ಲಿ
ನಿಜವಾಗಿ ಕಳೆದದ್ದು ಕನಸುಗಳಲ್ಲಾ ....
ನಿನ್ನೊಡನಿದ್ದ ಹೊತ್ತುಗಳಲ್ಲಿ
ಕನಸು ಕಟ್ಟುತ್ತಾ ಕಳೆದೆನಲ್ಲಾ .........
ಆ ಕ್ಷಣಗಳು

ನಿಜವಾಗಿ ಕಳೆದದ್ದು ನಿನ್ನೊಡನಿದ್ದ ದಿನಗಳು ...