Friday, April 25, 2014

ಭೂಮಿ ಬಿರುಕು ಬಿಟ್ಟು... ಕಾಲಿಗೆ ಮುಳ್ಳು ತಾಗಿ ರಕ್ತ ಸೋರುತ್ತಿದ್ದರೂ ನೆಲವನ್ನು ನೋಡದ ರೈತ ಆಕಾಶವನ್ನೇ ದಿಟ್ಟಿಸುತ್ತಿದ್ದ... ಮಳೆ ಬರಬಹುದು ಅಂತಾ...
ನಾನೂ ಹಾಗೆಯೇ...
ಎಷ್ಟೇ ಕಷ್ಟಗಳಿದ್ದರೂ ಆತ್ಮವಿಶ್ವಾಸದಿಂದ ದಿನ ನೂಕುತ್ತಿದ್ದೇನೆ..
ಯಾಕಂದ್ರೆ.. ನಾನೂ ಒಬ್ಬ ರೈತ..
ಕನಸುಗಳನ್ನು ಬೆಳೆಯುವವನು...

Thursday, February 4, 2010

ಅವಳು ಮತ್ತು ಮಳೆ

ಅವಳು ಮತ್ತು ಮಳೆ



ಕಿಲಕಿಲನೆ ನಗುತ್ತಿದ್ದವಳನ್ನು
ಅದಾಗ ತಾನೇ ಮುಗಿಲ ಮಾಡಿನಿಂದ
ಸುರಿದ ಮಳೆ ಹನಿ ಪುಳಕಿತಗೊಳಿಸಿತ್ತು..



ಅವನು ಬರುವ ಹಾದಿ ಕಾದು ಕಾದು

ಕನವರಿಸಿ ನಿಂತ ಕಣ್ಣುಗಳಿಗೆ
ಸ್ವಾತಿ ಹನಿಯ ಸಿಂಚನ,
ಇರುಳಿಡೀ ಸುರಿದ ಮಳೆಯಲ್ಲಿ

ಕಟ್ಟಿಕೊಂಡ ಕನಸುಗಳಿಗೆ ಮಾಘಸ್ನಾನ ...




ಕಳೆದ ಸ್ವಾತಿಯಲ್ಲಿ ಅವಳೊಡನೆ ಅವನಿದ್ದ

ಕಟ್ಟಿಕೊಂಡ ಕನಸುಗಳಿದ್ದೋ, ಹಾಡಿಕೊಂಡ ರಾಗಗಳು,
ಎಂದಿಗೂ ಮುಗಿಯದ ಅವರೇ ಬರೆದುಕೊಂಡ
ಹಾಡುಗಳಿದ್ದೋ ,
ಅದೆಷ್ಟೋ ಹನಿಗಲೊಳಗೆಬೆರೆತು ಹೋದ

ಮಾತುಗಳ ಮಾಲೆಗಲಿದ್ದೋ,
ಆದರೀಗ ..........


ಸ್ವಾತಿಯ ಪ್ರೀತಿಗೆ ಚಿಗುರೊಡೆದ
ಅಣಬೆಯಾ ನೆರಳಲಿ ಕಳೆದ ಕ್ಷಣಗಲಿದ್ದೋ ...
ತು೦ತುರು ಸೋನೆಯಲ್ಲಿ ಎಳೆ ಮಾವಿನ ಮರದಡಿ ನಿಂತು
ತಲೆ ನೇವರಿಸಿ "ನಾನಿದ್ದೇನೆ" ಎಂದಾಗ ಅವನಿದ್ದ,

ಆದರೀಗ .......


ಬಯಲಲ್ಲಿ ನಿಂತು ಧೋ ಎಂದು

ಸುರಿವ ಮಳೆಯಲ್ಲಿ ತುಟಿ ತೆರೆದು
ಹನಿ ಆಸ್ವಾದಿಸುವಾಗ ಅವನಿದ್ದ ....

ಮತ್ತೆ ಬರುವೆನೆಂದು
ಕಣ್ಣಲ್ಲಿ ಕಣ್ಣಿಟ್ಟು , ಕೆನ್ನೆ ತಟ್ಟಿ ಹೇಳಿ ಹೋಗುವಾಗ
ಆ ನೆನಪುಗಳೊಟ್ಟಿಗೆ ಅವನಿದ್ದ ....


ಶ್ರಾವಣದ ಆ ದಿನ ಹಸೆ ಮನೆಯಲ್ಲಿ

ಕೂತು ತಾಳಿ ಕಟ್ಟಿಸಿಕೊಂಡ ಕ್ಷಣದಲ್ಲಿ

ಪಕ್ಕದಲ್ಲಿದ್ದ ಮತ್ಹೊರ್ವನ ಮುಖದಲ್ಲಿ

ಅವನ ನೆನಪೂ ಇರಲಿಲ್ಲ .....

ಇದ್ದದ್ದು.............

ಮತ್ತೊಂದು ಮಾಘಸ್ನಾನಕ್ಕೆ ಮೈ ತೆರೆದು ನಿಂತ ಇಳೆ

ಹನಿಯೊಡನೆ ಕಣ್ಣೀರು ಬೆರೆಸುತ್ತಾ ನಿಂತ

ಅವಳು ಮತ್ತು ಮಳೆ......

Wednesday, February 3, 2010

Tuesday, October 13, 2009

ಕಾಡು ಮಲ್ಲಿಗೆ

ಕಾಡು ಮಲ್ಲಿಗೆ

ಕಾಡು ಮಲ್ಲಿಗೆ ಹೂ

ಕಾದಿರುವುದು ನಿನಗಾಗಿ

ತುರುಬನೇರುವ ಬಯಕೆಯದಕೆ

ನಿನ್ನ ಹಾದಿ ಕಾಯುತ್ತಾ

ಎದೆಯ ಗೂಡಲ್ಲಿ ಬಚ್ಚಿಟ್ಟಿರುವೆ

ದುಂಬಿಗಳ ಭಯಕ್ಕೆ........

Monday, October 12, 2009

ಕನಸುಗಳು

ಕಳೆದು ಹೋದ ಕನಸುಗಳು













ಕಳೆದುಹೋಗಿವೆ ಕನಸುಗಳು
ಕಲ್ಪನೆಯ ರಾತ್ರಿಯಲ್ಲಿ
ಕನವರಿಸಿ ನಿದ್ದೆಯಿಂದೆದ್ದ
ಮುಂಜಾವಿನ ಮಂಜಿನಲ್ಲಿ
ನಿನಗಾಗಿ ಕಾದ ಸಮಯದ ಸಮೀಪದಲ್ಲಿ ........

ಕಳೆದುಹೋಗಿವೆ ನನ್ನೆಲ್ಲಾ ಕನಸುಗಳು
ವ್ಯಾಪಾರದ ಹಂಗಿನಲ್ಲಿ
ವ್ಯಾಮೋಹದ ಗುಂಗಿನಲ್ಲಿ
ಒಲವು ಚೆಲುವುಗಳ ಸಮ್ಮೇಳನದಲ್ಲಿ
ಕಳೆದುಕೊಂಡ ಪದಗಳ
ಹುಡುಕಾಟದಲ್ಲಿ.

ಮೋಡ ಮಳೆ ಸುರಿಸುವ ಆತುರದಲ್ಲಿ
ನೆನೆದು ನಡುಗುತ್ತಾ ಸನಿಹ ನಿಂತ ಕ್ಷಣದಲ್ಲಿ
ಮಾತಿಗಾಗಿ ತಡಕಾಡುವಾಗ
ಸಿಕ್ಕ ಎರಡೇ ನಿಮಿಷವನ್ನು ಮೌನದಲ್ಲಿ
ಕಳೆದ ಕ್ಷಣದಲ್ಲಿ
ಕಟ್ಟಿಕೊಂಡ ಕನಸುಗಳು ಕಳೆದೆ ಹೋಗಿವೆ
ಜಗದ ಜಂಜಾಟದಲ್ಲಿ.

ಕಳೆದು ಹೋಗುವ ಭಯದಲ್ಲಿ
ನಿಜವಾಗಿ ಕಳೆದದ್ದು ಕನಸುಗಳಲ್ಲಾ ....
ನಿನ್ನೊಡನಿದ್ದ ಹೊತ್ತುಗಳಲ್ಲಿ
ಕನಸು ಕಟ್ಟುತ್ತಾ ಕಳೆದೆನಲ್ಲಾ .........
ಆ ಕ್ಷಣಗಳು

ನಿಜವಾಗಿ ಕಳೆದದ್ದು ನಿನ್ನೊಡನಿದ್ದ ದಿನಗಳು ...





Monday, September 7, 2009

ನೆನಪು ಕಾಡುತ್ತಿದೆ

ನೆನಪು....... ಕಾಡುತ್ತಿದೆ

ಪಕ್ಕದ ಕುರ್ಚಿಯಲ್ಲಿ
ನೀನೇ ಕುಳಿತು ನಕ್ಕ ಹಾಗೆ..........
ಕತ್ತಲಲ್ಲಿ ಇಳಿದು ಬಂದ
ಯಕ್ಷಿಣಿ ನಿನ್ನಂತೆಯೇ ಕಂಡ ಹಾಗೆ .....
ಹುಣ್ಣಿಮೆಯನ್ನರಸಿ
ನದಿಯುಕ್ಕಿ ಬಂದ ಹಾಗೆ
ಮತ್ತೆ ಮತ್ತೆ ಕಾಡುತ್ತಿದೆ
ನಿನ್ನ ನೆನಪು..........................

ಕಪ್ಪು ಹಲಗೆ ಮೇಲೆ ಕಂಡ ಅಕ್ಷರ
ನೀನೆ ನಿಂತು ತಿದ್ದಿದ ಹಾಗೆ ..............
ಕಿಟಕಿಯಿಂದಾಚೆ ನಿಂತು ನೀ
ಕೂಗಿದ ಹಾಗೆ
ತಂಗಾಳಿ ಬಂದು ಮುಖಕ್ಕೆ
ಮುತ್ತಿಟ್ಟ ಹಾಗೆ
ಮುತ್ತಿ ಕಾಡುತ್ತಿದೆ ನಿನ್ನ ನೆನಪು.......

ಕಂದಮ್ಮ ಕಿಲಕಿಲನೆ ನಕ್ಕ ಹಾಗೇ
ಮಳೆಬಿಲ್ಲ ಮೇಲೆ ನಿಂತು ನೀ ಕರೆದ ಹಾಗೇ ,
ನೀ ಬಿಟ್ಟುಹೋದ ಹೆಣ್ಣು ಗೊಂಬೆ
ವಿರಹದಲ್ಲಿ ಕೊರಗಿದ ಹಾಗೇ,
ಕನವರಿಸಿ ಕಾಡುತ್ತಿದೆ

ನಿನ್ನ ನೆನಪು ..............