Tuesday, July 8, 2014

ಕುಬೇರನಿಗೊಂದು ಕವರ್ ಲೆಟರ್


ಗೆ.
ಶ್ರೀ ಕುಬೇರ
ಯಾವುದೋ ‘ಯುಗ’ದ ಸಿರಿವಂತ

ನಮಸ್ಕಾರ ಸ್ವಾಮಿ,

ನೀವು ಅದಾವುದೋ ಯುಗದಲ್ಲಿ ಈಗಿನ ತಿರುಪತಿಯ ತಿಮ್ಮಪ್ಪ ಅಲಿಯಾಸ್ ಶ್ರೀನಿವಾಸ ರವರಿಗೆ ಅವರ ಮದುವೆಯ ಸಮಯದಲ್ಲಿ ಸಾಲ ಕೊಟ್ಟಿದ್ರೀ ಅಂತಾ ಯಾರೋ ಹಿರಿಯರು ಬರೆದಿರೋದನ್ನ ಅಲ್ಲಿ ಇಲ್ಲಿ ನಾವು ಓದಿದ್ವಿ, ಅದೇನ್​ ನಿಜಾನೋ ಸುಳ್ಳೋ ಗೊತ್ತಿಲ್ಲ... ಪ್ರಶ್ನೆ ಮಾಡ್ಬೇಡಿ ಅಂತಾ ದೊಡ್ಡೋರ್ ಹೇಳ್ಬಿಟ್ಟಿದ್ದಾರೆ.. ನೀವು ಕೊಟ್ಟಿರೋದಕ್ಕೂ ಅವರು ತೆಗೆದುಕೊಂಡಿರೋದಕ್ಕೂ ಯಾವುದೇ ಪತ್ರಗಳಿಲ್ಲ.  ಆ ಸಾಲ ತೀರಬೇಕು ಅಂದ್ರೆ  ಇಡೀ ಕಲಿಯುಗ ಮುಗಿಯುವವರೆಗೂ ಬಡ್ಡಿ ಕಟ್ಟಬೇಕು ಅಂತಾ ಹೇಳಿದ್ರಂತೆ. ಆದ್ರೆ ತಿಮ್ಮಪ್ಪ ಮಾಡಿರೋ ಸಾಲಕ್ಕೆ ನಮ್ಮಪ್ಪ ಯಾಕ್ ಬಡ್ಡಿ ಕಟ್ಟಬೇಕು ಅನ್ನೋದು ನಮ್ಮ ಪ್ರಶ್ನೆ.. ಇರ್ಲಿ.. ಇಡೀ ಕಲಿಯುಗ ಮುಗ್ಯೋವರ್ಗೂ ಬಡ್ಡಿ ಕಟ್ಟಬೇಕು ಅಂದ್ರೆ ನೀವು ಕೊಟ್ಟಿರೋ ಸಾಲ ಎಷ್ಟು, ....?ಎಷ್ಟು ಪರ್ಸೆಂಟ್ ಬಡ್ಡಿ...? ಈಗ ಬಡ್ಡಿ ದಂಧೆ ಮಾಡೋದು ಈಗಿನ ಕಾನೂನಿನ ಪ್ರಕಾರ ಅಪರಾಧ ಸ್ವಾಮಿ.. 
ಹಾಗಾಗಿ ಇದುವರೆಗೂ ನಿಮಗೆ ಸಂದಾಯವಾಗಿರೋ ಹಣ ಎಷ್ಟು, ಇನ್ನೂ ಎಷ್ಟು ಸಂದಾಯವಾಗಬೇಕು, ಈಗ ನಿಜವಾಗ್ಲೂ ಹಣ ನಿಮಗೆ  ಸಂದಾಯವಾಗ್ತಾ ಇದ್ಯಾ ಅನ್ನೋ ಮಾಹಿತಿಯನ್ನು ‘ಮಾಹಿತಿ ಹಕ್ಕು ಅಧಿನಿಯಮ’ ದ ಪ್ರಕಾರ ನೀಡಬೇಕು ಅಂತಾ ಆಗ್ರಹಿಸ್ತಾ ಇದ್ದೀನಿ.
(ಚಿಕ್ಕ ವಯಸ್ಸಿನಲ್ಲಿ ಮನೆಯ ದೊಡ್ಡವರ ಆಗ್ರಹಕ್ಕೆ ಕಟ್ಟುಬಿದ್ದು ಎರಡು ಸಲ ‘ಕೇಶದಾನ’ ಮಾಡಿರೋ ನೈತಿಕ ಅಧಿಕಾರದಿಂದ ಪ್ರಶ್ನಿಸ್ತಿದ್ದೇನೆ)

ಇಂತಿ
ಭವ್ಯ ಭಾರತದ ಪ್ರಜೆ

Saturday, July 5, 2014

ನನ್ನೊಳಗಿರೋ ‘ದೇವರು’..

ನನ್ನೊಳಗಿರೋ ದೇವರು ನಿರಾಕಾರ... ಅವನಿಗೆ ನಾನು ಗುಡಿ ಕಟ್ಟುವಷ್ಟು ದೊಡ್ಡವನಲ್ಲಾ ...
ನನ್ನೊಳಗಿರೋ ದೇವರು ಸಿರಿವಂತ... ಅವನಿಗೇ ದಕ್ಷಿಣೆ ನೀಡುವಷ್ಟು ದೌಲತ್ತು ನನಗಿಲ್ಲ...
ನನ್ನೊಳಗಿರೋ ದೇವರು ನನ್ನಷ್ಟೇ ಆತ್ಮೀಯ... ಪೂಜಿಸು ಅಂತಾ ಹೆದರಿಸೋದಿಲ್ಲ....

Tuesday, July 1, 2014

ಎರಡು ಹಿಡಿ ಅಕ್ಕಿ... ನಾಲ್ಕು ತುಪ್ಪದ ದೀಪ...



ಬೆಳಿಗ್ಗೆ  ಬೆಳಿಗ್ಗೆಯೇ ಯಾಕೋ ಶಂಕ್ರಣ್ಣನ ಹೋಟೆಲ್ ಕಾಫಿ ಕುಡಿಬೇಕು ಅಂತಾ ಅನ್ನಿಸಿದ್ದೇ ತಡಾ ಕೊರಗ ನೇರವಾಗಿ ಶಂಕರಣ್ಣನ ಹೋಟೆಲ್ ಮುಂದೆ ಸ್ಥಾಪಿತನಾಗಿಬಿಟ್ಟಿದ್ದ... ಪ್ಲಾಸ್ಟಿಕ್ ಲೋಟದ ಅಂಚು ಸವರುತ್ತಾ.. ಶಂಕರಣ್ಣ ಕೊಡೋ ಕಪ್ಪು ಕಾಫಿಗಾಗಿ ಕಾಯ್ತಾ ಕೂತಿದ್ದ... ಅಷ್ಟರಲ್ಲಿ ಶಂಕ್ರಣ್ಣನ ಹೆಂಡತಿ ಮಾದೇವಮ್ಮ ಟಿವಿ ಹಾಕಿ ಊರಿಗೇ ಕೇಳ್ಸೋ ಹಾಗೆ ಸವಂಡ್ ಜಾಸ್ತಿ ಮಾಡಿ ಒಳಗಡೆ ಹೋದ್ರು... ಕಾಲ ಕಳೆಯೋಕೆ ಕೊರಗ ಟಿವಿ ಕಡೆ ಕಣ್ಣು ಹಾಯಿಸಿದ್ದ....
‘ನಮಸ್ಕಾರ, ಹೇಳಿಮಾ ಏನ್ ನಿಮ್ಮ ಸಮಸ್ಯೆ...?’ ಟಿವಿಯಲ್ಲಿ ಜ್ಯೋತಿಷಿಯೊಬ್ಬರು ಮಾತಾಡ್ತಾ ಇದ್ರು... ಅವರನ್ನ ನೋಡ್ತಾ ಇದ್ದ ಹಾಗೇ ಕೊರಗನ ಕಿವಿ ನೆಟ್ಟಗಾದವು....
‘ಸ್ವಾಮಿ, ನಮ್ ಮಗ ಯಾಕೋ ಮಂಕು ಹಿಡಿದಂಗಾಗ್ಬಿಟ್ಟಿದೆ.... ಆಮೇಲೆ.........’ ಪಾಪ ಇನ್ನೂ ಏನೇನೋ ಸಮಸ್ಯೆ ಹೇಳ್ಕೊಳ್ತಲೇ ಇದ್ಲು ಆಕೆ... ಅಷ್ಟರಲ್ಲಿ ಶಂಕ್ರಣ್ಣ ಕೊಟ್ಟ ಕಾಫಿ ಕೊರಗನ ಕೈಲಿದ್ದ ಲೋಟ ಸೇರಿತ್ತು... ಸೊರ್​್್​್​್​.... ಅಂತಾ ಸದ್ದು ಮಾಡ್ತಾ ಕಾಫಿ ಹೀರ್ತಾ ಇದ್ದ...
‘ಹೌದೇ,, ನೋಡಿಮಾ... ಎಡಗೈಯಲ್ಲಿ ಎರಡು ಹಿಡಿ ಅಕ್ಕಿ ತೊಗೊಂಡು... ಅನ್ನು ಮಣ್ಣಿನ ಮಡಿಕೇಲಿ... ಬಿಸಿ ನೀರಿಗೆ ಅರಿಶಿನ ಹಾಕಿ... ಅನ್ನ ಮಾಡಿ... ಮೂರು ದಾರಿ ಕೂಡೋ ಕಡೆ ಅದನ್ನ ಇಟ್ಟು ಹಿಂತಿರುಗಿ ನೋಡದೇ ಬಂದುಬಿಡಿ... ಆಯ್ತೆ... ಮನೆಗೆ ಬಂದು 4 ತುಪ್ಪದ ದೀಪ ಹಚ್ಚಿ... ಎಲ್ಲಾ ಒಳ್ಳೇದಾಗುತ್ತೆ...’ ಜ್ಯೋತಿಷಿಯ ಮಾತು ಮುಗಿದಿತ್ತು...
ಕೊರಗ ಸುಮ್ಮನೆ ಒಂದ್ಸಲ ನಕ್ಕು ಸುಮ್ಮನಾದ.... ಗಂಜಿ ಮಾಡೋಕೂ ಅಕ್ಕಿ ಇಲ್ಲಾ ಅಂತಾ ಅವನ ಹೆಂಡತಿ ಮಾದಿ ಹೇಳಿದ್ದು ನೆನಪಾಗಿ ಅಕ್ಕಿ ಸಾಲ ತರೋಕೆ ಅಂತಾ ಹೊರಟ.... ಆ ಜ್ಯೋತಿಷಿ ಇನ್ನೊಬ್ಬರಿಗೆ ಇನ್ನೊಂದು ಸಮಸ್ಯೆಗೆ ‘ಪರಿಹಾರ’ಹೇಳ್ತಾ ಇದ್ರು...

Thursday, June 19, 2014


ಅದು ಮಾನಸ ಗಂಗೋತ್ರಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ... 1965, ಜೂನ್ 24ರಂದು ಜನ್ಮ ತಳೆದ ಕೂಸಿಗೀಗ 50ರ ಹರೆಯ... ಅಗಾಧವಾಗಿ ಬೆಳೆದು ನಿಂತ ಈ ಆಲದ ಮರದ ಒಂದು ಎಲೆ ನಾನು ಕೂಡಾ ಅಂತಾ ಹೇಳ್ಕೊಳ್ಳೋಕೆ ಏನೋ ಒಂಥರಾ ಖುಷಿ ಅನ್ಸುತ್ತೆ... ಸಾವಿರಾರು ಸಾಮಾನ್ಯರನ್ನ ತನ್ನೊಳಗೆ ತೆಗೆದುಕೊಂಡು ಅಸಾಮಾನ್ಯರನ್ನಾಗಿಸಿದ, ಜ್ಞಾನ ಬುತ್ತಿಯನ್ನುಣಿಸಿದ ಅಕ್ಷಯ ಪಾತ್ರೆ.... ಇದರ ಬಿಳಲುಗಳಲ್ಲಿ ಜೀಕಾಡಿ ಕಲಿತು ಬೆಳೆದ ಕಂದಮ್ಮಗಳ ಮುಂದೆ ನಸುನಗುತ್ತಾ ನಿಂತಿರುವ ಈ ಮುತ್ಸದ್ಧಿ ಇದೇ 24ನೇ ತಾರೀಖು ತನ್ನ ಕುಟುಂಬದವರ ಜೊತೆ ಜನ್ಮದಿನವನ್ನು ಆಚರಿಸಿಕೊಳ್ತಾ ಇದೆ... ಇಡೀ ಕುಟುಂಬ ಅವತ್ತು ಒಂದು ಕಡೆ ಸೇರ್ತಾ ಇದೆ... ಕುಟುಂಬದ ಹಿರಿಯರು ತಮ್ಮ ಅನುಭವವನ್ನು ಕಿರಿಯರ ಮುಂದೆ ಹಂಚಿಕೊಳ್ತಾರೆ... ಆದ್ರೆ ಅದರಲ್ಲಿ ಪಾಲ್ಗೊಳ್ಳೋಕಾಗ್ತಾ ಇಲ್ಲ ಅನ್ನೋ ಸಂಕಟ ನನ್ನದು... ಆದರೆ ನೆನಪುಗಳು ಮಾತ್ರ ಎಂದೂ ಬತ್ತದ ಜೀವಸೆಲೆಯಂತೆ ಉಮ್ಮಳಿಸಿ ಬರುತ್ತಿವೆ.. 2008ರಲ್ಲಿ ಅರೇ.. ‘ಹೀಗೂ ಒಂದು ವಿಷಯಾ ಇದ್ಯಾ..’ ಅಂತಾ ಕುತೂಹಲದಿಂದ ಕೋರ್ಸಿಗೆ ಸೇರಿದ ನಮಗೆ ಅದು ವಿಷಯ ಅಲ್ಲಾ ವಿಶ್ವಕೋಶ ಅಂತಾ ಆದಷ್ಟು ಬೇಗನೇ ತಿಳಿತು...ಇಡೀ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಲೈಬ್ರರಿಗೆ ಬರ್ತಾ ಇದ್ರೆ... ನಾವು ಅದರೊಳಗೇ ಇದ್ದಿದ್ದು ಇನ್ನೊಂದು ಹೆಮ್ಮೆಯ, ಗರ್ವದ ವಿಷಯವಾಗಿತ್ತು... ಎಲ್ಲಾ ಸಬ್ಜೆಕ್ಟ್ ಗಳು (disciplines) ನಮಗೆ ನಂಬರ್ ಗಳ ರೂಪದಲ್ಲಿ ಕಾಣಿಸ್ತಿದ್ವು... DDC, UDC, CC, Cataloging..... ಬಹುಷಃ ನಾವೆಷ್ಟೇ Explain ಮಾಡಿದ್ರೂ ಬೇರೇ ಡಿಪಾರ್ಟ್​ಮೆಂಟ್ ನ ಹುಡುಗರಿಗೆ ಇವೆಲ್ಲಾ ಅರ್ಥವಾಗದೇ ಇದ್ದಾಗ... ನಾವೇನೋ ವಿಶೇಷವಾದದ್ದನ್ನ ಓದ್ತಿದ್ದೀವಿ ಅಂತಾ ಒಳಗೊಳಗೆ ಅದೆಷ್ಟು ದಿನಾ ನಕ್ಕಿದ್ವೋ ಗೊತ್ತಿಲ್ಲ...
ಇವತ್ತು ನಾನು ಓದಿದ್ದಕ್ಕೂ ಮಾಡ್ತಾ ಇರೋ ಕೆಲಸಕ್ಕೂ ಸಂಬಂಧವೇ ಇಲ್ಲಾ.. ಆದ್ರೆ ಅಲ್ಲಿ ಕಲಿತ ವಿದ್ಯೆ ನನಗೆ ಇವತ್ತಿಗೂ ಸಹಾಯ ಮಾಡ್ತಾ ಇದೆ... ಮನೆಯಲ್ಲಿ ನನ್ನದೇ ಸಣ್ಣದೊಂದು ಗ್ರಂಥಾಲಯ ಮಾಡ್ಕೊಂಡಿದ್ದೀನಿ ಅಷ್ಟರ ಮಟ್ಟಿಗೆ ಓದಿದ್ದನ್ನು ಸಾಕಾರ ಮಾಡ್ಕೊಳ್ಳೋ ಪ್ರಯತ್ನ... ಇಷ್ಟೆಲ್ಲಾ ಕಲಿಸಿದ ಗುರುವೃಂದದವರಿಗೆ ಶರಣು ಶರಣಾರ್ಥಿ...
ಬೈಯುತ್ತಲೇ ನಮಗೆಲ್ಲಾ ಇಷ್ಟವಾಗಿದ್ದ ವೈ. ವೆಂಕಟೇಶ್ ಸರ್.. Personality Development Class ಮೂಲಕ ನಮಗೆ ಪರಿಚಯವಾಗಿ ಆಮೇಲೆ UDC ಹೇಳಿಕೊಟ್ಟ ಆದಿತ್ಯ ಕುಮಾರಿ ಮೇಡಂ.. There is NO FREE LUNCH in Life ಅಂತಾ Management ಹೇಳಿಕೊಟ್ಟ ಖೈಸರ್ ನಿಕಂ ಮೇಡಂ... Cataloging ಹೇಳಿಕೊಟ್ಟ ಕುಂಬಾರ್ ಸರ್... OK OK ಅಂತಾ ಸದಾ ಆತ್ಮವಿಶ್ವಾಸದಿಂದ ಪುಟಿಯಿತ್ತಿದ್ದ ಚಂದ್ರಶೇಖರ್ ಸರ್... ಇವತ್ತಿಗೂ Information... Information Retrieval ಅಂದಾಕ್ಷಣ ಥಟ್ಟನೇ ನೆನಪಾಗೋ ಹರಿನಾರಾಯಣ್ ಸರ್.. ಸ್ವಲ್ಪ ದಿನ ಪಾಠ ಮಾಡಿ ಉಪಕುಲಪತಿಗಳಾದ ತಳವಾರ್ ಸರ್.. ಎಲ್ಲರನ್ನೂ ನೆನೆಯುತ್ತಾ ಅಲ್ಲಿರಲಾರದ ಸಂಕಟಕ್ಕೆ ಸಮಾಧಾನ ಮಾಡ್ಕೋತೀನಿ... 2 ವರ್ಷಗಳು ನಿಜವಾಗಿಯೂ ನಮ್ಮ ಜೀವನದ ಸುವರ್ಣ ವರ್ಷಗಳು... 50ರ ವಸಂತಕ್ಕೆ ಕಾಲಿಡ್ತಿರೋ ಆ ಚಿರಯೌವ್ವನಿಗನಿಗೆ ನನ್ನ ಕಡೆಯಿಂದ ಶುಭಾಷಯ....

ಬೇರೆಯವರ ಒಳ್ಳೆತನವನ್ನು ದೌರ್ಬಲ್ಯ ಅಂದ್ಕೊಂಡು ......


ಅದು ಸೊಲ್ಲಾಪುರಕ್ಕೆ ಹೋಗೋ ಟ್ರೈನ್... ಯಾವಾಗ್ಲೂ ಜನರಿಂದ ಗಿಜಿಗುಡುವ ಟ್ರೈನ್.. ಹೇಗೋ ಆಶ್ಚರ್ಯಕರ ರೀತಿಯಲ್ಲಿ ನನಗೆ ಸೀಟ್ ಸಿಕ್ತು. ನನ್ನೆದುರು ಒಬ್ಬ ಯುವಕ ನಿಂತಿದ್ದ.. ಸುಮಾರು 25-26ರ ಪ್ರಾಯ.. ಬಹುಷಃ ದಾವಣಗೆರೆಯ ಕಡೆಯವನಿರಬೇಕು. ಅಂತೂ ಅವನಿಗೂ ಯಶವಂತಪುರದಲ್ಲಿ ಸೀಟ್ ಸಿಕ್ತು. ನನ್ನ ಪಕ್ಕ ಬಂದು ಕೂತ. ಇನ್ನೂ ಒಬ್ಬರು ಕೂರಬಹುದಾದಷ್ಟು ಜಾಗವಿತ್ತು. ಯಶವಂತಪುರದಲ್ಲಿ ಒಬ್ಬ ಯುವಕ ಮತ್ತು ಯುವತಿ ನಮ್ಮ ಬೋಗಿಗೇ ಹತ್ತುದ್ರು.. ಬಹುಷಃ ಕೊಲಿಗ್ಸ್ ಅನ್ಸುತ್ತೆ.. ಹೇಗೋ ಅಡ್ಜಸ್ಟ್ ಮಾಡ್ಕೊಂಡು ನಾನು ಕೂತಿದ್ದ ಕೂತ್ರು.. ಮಾತಾಡ್ತಾ ಮಾತಾಡ್ತಾ ಇನ್ನೇನು ನೆಕ್ಸ್ಟ್ ಸ್ಟಾಪ್ ನಲ್ಲಿ ಇಳಿಯೋದಲ್ವಾ... ಅಂತಿದ್ರು... ಈ ದಾವಣಗೆರೆಯ ಹುಡುಗನಿಗೆ ಏನನ್ನುಸ್ತೋ.. ಪಾಪ ಹುಡುಗಿ ಆರಾಮವಾಗಿ ಕೂರ್ಲಿ ಅಂತಾ ‘‘ನೆಕ್ಸ್ಟ್ ಸ್ಟಾಪ್ ನಲ್ಲಿ ಇಳಿತೀರಾ..? ಹಾಗಿದ್ರೆ ಅಲ್ಲಿಯವರೆಗೂ ನಾನು ಡೋರ್ ನಲ್ಲಿ ನಿಂತಿರ್ತೀನಿ..’’ ಅಂತಾ ಎದ್ದು ನಿಂತ. ಆ ಯುವಕ ಯುವತಿ ಮೆಲ್ಲಗೆ ನಕ್ಕರು.. ಯಾಕಂದ್ರೆ ಆ ಟ್ರೈನ್ ನೆಕ್ಸ್ಟ್ ನಿಲ್ಲೋದೇ ತುಮಕೂರಿನಲ್ಲಿ...!! ಎಷ್ಟೇ ಬೇಗ ಅಂದ್ರೂ ಸುಮಾರು 40-50 ನಿಮಿಷದ ಪ್ರಯಾಣ.. ಆ ಹುಡುಗ ನಿಂತೂ ನಿಂತೂ ‘ಈಗ ಇಳಿಬಹುದು...’ ಅಂತಾ ಕಾಯ್ತಲೇ ಇದ್ದ.. ಟ್ರೈನ್ ನಿಲ್ಲೋ ನಿಲ್ಲೋ ಹಾಗೆ ಕಾಣ್ಲಿಲ್ಲ.. ಇತ್ತ ಈ ಸಹೋದ್ಯೋಗಿಗಳಿಬ್ಬರೂ ಮೊಬೈಲ್ ನಲ್ಲಿ ವಿಡಿಯೋ ನೋಡ್ತಾ... ನಗ್ತಾ ಕೂತಿದ್ರು.. ಅವನಿಗೆ ಜಾಗ ಬಿಡುವ ಯಾವ ಲಕ್ಷಣವೂ ಕಾಣ್ಲಿಲ್ಲ.. ನನಗೆ ಯಾಕೋ ಬೇಜಾರಾಯ್ತು... ಅವನಿಗೆ ನನ್ನ ಪಕ್ಕವೇ ಕೂರೋಕೆ ಸ್ವಲ್ಪ ಜಾಗ ಕೊಟ್ಟೆ... ಬೇರೆಯವರ ಒಳ್ಳೆತನವನ್ನು ದೌರ್ಬಲ್ಯ ಅಂದ್ಕೊಂಡು ಅವಕಾಶವನ್ನು ಎನ್ ಕ್ಯಾಶ್ ಮಾಡ್ಕೊಳ್ಳೋ ಇವತ್ತಿನ ಸುಂಸಸ್ಕೃತ, edcuated ಯುವ ಜನತೆಗೆ ಏನ್ ಹೇಳ್ಬೇಕೋ ಗೊತ್ತಾಗ್ಲಿಲ್ಲ...

Tuesday, June 17, 2014



1ರೂಪಾಯಿಗೆ 1 ಕೆಜಿ ಅಕ್ಕಿ ಕೊಡೋದಕ್ಕಿಂತ
ಸಂಸ್ಕರಿಸಿ ತಂದುಕೊಡೋ 1 ಕೆಜಿ ಕಸವನ್ನು 3ರೂಪಾಯಿಗೆ ಕೊಂಡ್ಕೋತೀವಿ ಅಂದಿದ್ರೆ 
ಬೆಂಗಳೂರಿನ ಅರ್ಧ ಕಸ ಖಾಲಿಯಾಗ್ತಾ ಇತ್ತೇನೋ..!!!! 
ಅಲ್ವಾ...?
ಎಂದೋ ಗೀಚಿದ್ದ ಸಾಲುಗಳು
ಇಂದು ಅಣಕಿಸುತ್ತಿವೆ
ಪದಗಳ ಅರ್ಥ ತಿಳಿದು

ಅಕ್ಷರಗಳ ಆಳಕ್ಕಿಳಿದು