ಧರೆಗೆ ಬರುವ ಮೊದಲೇ.....
ಜಗತ್ತು ನಿನ್ನನ್ನು ಜ್ಞಾನಿ ಅಂತಿದೆ.. ತಿಳಿದವನು ಅಂತಿದೆ... ಸತ್ಯದನ್ವೇಷಕ ಅಂತಿದೆ... ಇದೆಲ್ಲಾ ಇರಬಹುದು.. ಆದರೆ ನಿನ್ನನ್ನೂ ದೈವತ್ವಕ್ಕೇರಿಸಿಬಿಟ್ಟರಲ್ಲಾ ಮಗೂ...
ಈ ತಾಯಿಯ ಮುದ್ದು ಕಂದ ನೀನು.. ಜಗತ್ತಿನ ಯಾವ ತಾಯಿಯೂ ನನ್ನಷ್ಟು ಹೆಮ್ಮೆಪಟ್ಟಿರಲಾರಳು.. ನೀನು ನನ್ನ ಗರ್ಭದಲ್ಲಿ ಟಿಸಿಲೊಡೆದ ಕ್ಷಣದಿಂದ ಒಬ್ಬ ಹೆಣ್ಣಾಗಿ ಒಂಭತ್ತು ಮಾಸಗಳು ನಾನು ಅನುಭವಿಸಿದ ಸಂತೋಷ... ಹೆಮ್ಮೆ... ನೋವು... ತೃಪ್ತಿ.. ಮತ್ಯಾರಿಗೂ ಸಾಧ್ಯವಿಲ್ಲ...
ನಿನ್ನ ಪುಟ್ಟ ಕಾಲುಗಳಿಂದ ನನ್ನ ಹೊಟ್ಟೆಯನ್ನು ಒದೆಯುವಾಗ ‘‘ಇವನಿಗೆಷ್ಟು ಧಾವಂತ ಹೊರಬರಲು ’’ ಅಂತಿದ್ದೆ... ಆದರೆ ಈಗ ನನಗೆ ಅರಿವಾಗ್ತಾ ಇದೆ.. ನನ್ನ ಹೊಟ್ಟೆಯನ್ನೊದ್ದು ಬಂದ ನಿನೆಗೆ ಈ ಜಗದ ಅಜ್ಞಾನದ, ಮೌಢ್ಯತೆಯ ಕತ್ತಲೆಯನ್ನು ಒದೆಯುವ ಧಾವಂತವಿತ್ತು ಅಂತಾ... ಪ್ರಶ್ನಾತೀತವಾಗಿದ್ದ ಈ ಸಮಾಜದಲ್ಲಿ ಅರಿವಿನ ಹರಿಗೋಲು ಹಿಡಿದು ಸತ್ಯದ ಅನ್ವೇಷಣೆಗೆ ತೊಡಗೋ ನಿನ್ನಂತ ಒಬ್ಬ ನಾವಿಕ ಈ ದೇಶಕ್ಕೆ ಬೇಕಿತ್ತು ಮಗು...
ಆ ನಾವಿಕನ ಭಾವಲಹರಿ ಹರಿಯಲು ನಾನು ಕಾರಣಳಾದೆ ಎಂದರೆ ನಾನೆಷ್ಟು ಭಾಗ್ಯವಂತೆ ಅಲ್ವಾ...? ಇತಿಹಾಸದ ಪುಟಗಳಲ್ಲಿ ನಿನ್ನ ಹೆಸರಿನೊಂದಿಗೆ ಈ ಅಮಾಯಕಳ ಹೆಸರೂ ತಳುಕು ಹಾಕಿಕೊಂಡಿದೆಯೆಂದರೆ ನನ್ನ ಪುಣ್ಯದ ಫಲ ಅದು...
ನಿನ್ನಂತಹ ಅಗಾಧವಾದ ಚೈತನ್ಯವನ್ನು ನನ್ನ ಗರ್ಭದಲ್ಲಿಟ್ಟುಕೊಳ್ಳುವ ಶಕ್ತಿ ಅದೆಲ್ಲಿಂದ ಬಂತೋ ನಾನರಿಯೇ... ಬ್ರಹ್ಮಾಂಡದ ಸತ್ಯವನ್ನೆಲ್ಲಾ ಮಾಂಸದ ಮುದ್ದೆಯನ್ನಾಗಿಸಿ ನನ್ನೊಳು ಹೊತ್ತಂತಾಗಿತ್ತು.. ಮುಂದೊಂದು ದಿನ ನೀನು ಈ ಮಟ್ಟಿಗೆ ಪ್ರಜ್ವಲಿಸುತ್ತೀಯೆ ಎಂದು ತಿಳಿದಿದ್ದರೆ, ಆ ಭಯದ ಪ್ರಜ್ಞೆಯಲ್ಲಿಯೇ ನಾನು ಏನಾಗುತ್ತಿದ್ದೆನೋ ಗೊತ್ತಿಲ್ಲಾ..
ನನ್ನೆಲ್ಲಾ ಅಂತಃಸತ್ವವನ್ನೆಲ್ಲಾ ಹೀರಿಬಿಟ್ಟೆಯಲ್ಲಾ ನೀನು.... ಗರ್ಭದೊಳಗಿರುವಾಗ ನಿನ್ನ ಚಲನೆಯೇ ನನಗೆ ಆ ಮಟ್ಟಿನ ಆಹ್ಲಾದಕರ ಭಾವ ನೀಡುತ್ತಿತ್ತು... ಸಾವಿರಾರು ವರ್ಷಗಳ ಕಾಲ ಚಿರವಾಗಿರುವ ಮಗನೊಬ್ಬ ನನ್ನೊಳು ಆವೀರ್ಭವಿಸಿದನೆಂದು ನೆನೆದರೆ ನನ್ನೊಳಗೆಂತದೋ ಮಿಂಚಿನ ಸಂಚಾರ.. ಜಗತ್ತಿಗೇ ಗೊತ್ತು ಈ ಮಹಾಪುರುಷನ ತಾಯಿ ನಾನೆಂದು... ಆದರೆ ಈ ಜಗತ್ತಿನ ಮುಂದೆ ಒಮ್ಮೆಯೂ ನಿನ್ನಿಂದ ಅಮ್ಮಾ ಎನಿಸಿಕೊಳ್ಳಲಿಲ್ಲಾ...
ಅದೆಲ್ಲಿತ್ತು ಮಗು ನಿನ್ನೊಳು ಅಂತಾ ಜ್ಞಾನ.. ಜಗದ ಸೊಗಸನ್ನು ಅರಿಯದ ನನಗೆ ಗರ್ಭದಲ್ಲಿಯೇ ಜ್ಞಾನದ ಸೊಗವನ್ನುಣಿಸಿದವನು ನೀನು.. ಲುಂಬಿಣಿಯಲ್ಲಿ ನಿನ್ನ ಹೆತ್ತ ದಿನದಿಂದ ನನ್ನ ದೇಹದ ಅವಿಭಾಜ್ಯ ಅಂಗವೇ ಕಳೆದು ಹೋಯಿತೇನೋ ಎನಿಸುತ್ತಿತ್ತು... ಆದರೆ ನಂತರವೇ ನನಗೆ ತಿಳಿದಿದ್ದು.. ನನ್ನ ದೇಹದ ಅಣು - ಅಣುವಿನ ಸತ್ವವನ್ನೆಲ್ಲಾ ಹೊತ್ತು ಭೂಮಿಗೆ ಬಂದವನು ನೀನೆಂದು..
‘‘ಧರೆಗೆ ಬರುವ ಮೊದಲೇ ನನ್ನೊಳು ದಮ್ಮವನ್ನು ಬಿತ್ತಿದವನು ನೀನು’’
ನಾನು ಇಲ್ಲವಾಗಿಲ್ಲ ಮಗೂ.. ನಿನ್ನಲ್ಲಿ.. ನಿನ್ನೊಳಗೆ.. ನಿನ್ನೊಡನೆ ಈ ಪಾಮರಳ ಹೆಸರೂ ಚಿರವಾಗಿ ಉಳಿದಿದೆ.. ಎಂದೂ ಆರದ ಬೆಳಕಿನಡಿಯ ನೆರಳಿನಂತೆ. ಸಾಂಚಿಯಲ್ಲಿ ಕೊನೆಯ ಭೋದನೆ ನೀಡಿ ಅರೆಗಣ್ಣಲ್ಲಿ ಮಲಗಿದ ನಿನ್ನ ಕಂಡರೆ.. ‘‘ಅಯ್ಯೋ ನನ್ನ ಕಂದ ಈ ಜಗತ್ತಿನ ಮತ್ಯಾವ ಸಮಸ್ಯೆಗೆ ಪರಿಹಾರ ಕಾಣಲು ವಿಶ್ರಮಿಸುತ್ತಿರುವನೋ.. ಸೆರಗ ಅಂಚಲ್ಲಿ ಗಾಳಿ ಬೀಸಲೇ..’’ ಎಂದೆನಿಸುತ್ತದೆ.. ‘‘ನಿನ್ನ ತಲೆಯನ್ನು ಮಡಿಲಲ್ಲಿಟ್ಟು ಲಾಲಿ ಹಾಡಲೇ..?’’ ಎಂದೆನಿಸುತ್ತದೆ. ಅಜ್ಞಾನದ ಕಿಚ್ಚನ್ನು ದಮ್ಮದ ತಂಗಾಳಿಯಲ್ಲಿ ಆರಿಸಿದವನಿಗೆ ಗಾಳಿ ಬೀಸಲು ನಾನೆಷ್ಟರವಳು.. ಭೂಮಿ ತೂಕದ ನಿನಗೇ ಮಡಿಲೊಡ್ಡಿರುವ ನಾನೆಂತ ಮರುಳೆ ಎಂದು ನಗು ಬರುತ್ತದೆ..
ಈ ಹುಚ್ಚು ತಾಯಿಯ ಮನದ ಬಯಕೆಯಿದು..
‘‘ಮತ್ತೇ ಹುಟ್ಟಿ ಬಾ ಕಂದ.. ಈ ತಾಯಿಯ ಗರ್ಭದಲ್ಲಿ....’’