Thursday, June 19, 2014


ಅದು ಮಾನಸ ಗಂಗೋತ್ರಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ... 1965, ಜೂನ್ 24ರಂದು ಜನ್ಮ ತಳೆದ ಕೂಸಿಗೀಗ 50ರ ಹರೆಯ... ಅಗಾಧವಾಗಿ ಬೆಳೆದು ನಿಂತ ಈ ಆಲದ ಮರದ ಒಂದು ಎಲೆ ನಾನು ಕೂಡಾ ಅಂತಾ ಹೇಳ್ಕೊಳ್ಳೋಕೆ ಏನೋ ಒಂಥರಾ ಖುಷಿ ಅನ್ಸುತ್ತೆ... ಸಾವಿರಾರು ಸಾಮಾನ್ಯರನ್ನ ತನ್ನೊಳಗೆ ತೆಗೆದುಕೊಂಡು ಅಸಾಮಾನ್ಯರನ್ನಾಗಿಸಿದ, ಜ್ಞಾನ ಬುತ್ತಿಯನ್ನುಣಿಸಿದ ಅಕ್ಷಯ ಪಾತ್ರೆ.... ಇದರ ಬಿಳಲುಗಳಲ್ಲಿ ಜೀಕಾಡಿ ಕಲಿತು ಬೆಳೆದ ಕಂದಮ್ಮಗಳ ಮುಂದೆ ನಸುನಗುತ್ತಾ ನಿಂತಿರುವ ಈ ಮುತ್ಸದ್ಧಿ ಇದೇ 24ನೇ ತಾರೀಖು ತನ್ನ ಕುಟುಂಬದವರ ಜೊತೆ ಜನ್ಮದಿನವನ್ನು ಆಚರಿಸಿಕೊಳ್ತಾ ಇದೆ... ಇಡೀ ಕುಟುಂಬ ಅವತ್ತು ಒಂದು ಕಡೆ ಸೇರ್ತಾ ಇದೆ... ಕುಟುಂಬದ ಹಿರಿಯರು ತಮ್ಮ ಅನುಭವವನ್ನು ಕಿರಿಯರ ಮುಂದೆ ಹಂಚಿಕೊಳ್ತಾರೆ... ಆದ್ರೆ ಅದರಲ್ಲಿ ಪಾಲ್ಗೊಳ್ಳೋಕಾಗ್ತಾ ಇಲ್ಲ ಅನ್ನೋ ಸಂಕಟ ನನ್ನದು... ಆದರೆ ನೆನಪುಗಳು ಮಾತ್ರ ಎಂದೂ ಬತ್ತದ ಜೀವಸೆಲೆಯಂತೆ ಉಮ್ಮಳಿಸಿ ಬರುತ್ತಿವೆ.. 2008ರಲ್ಲಿ ಅರೇ.. ‘ಹೀಗೂ ಒಂದು ವಿಷಯಾ ಇದ್ಯಾ..’ ಅಂತಾ ಕುತೂಹಲದಿಂದ ಕೋರ್ಸಿಗೆ ಸೇರಿದ ನಮಗೆ ಅದು ವಿಷಯ ಅಲ್ಲಾ ವಿಶ್ವಕೋಶ ಅಂತಾ ಆದಷ್ಟು ಬೇಗನೇ ತಿಳಿತು...ಇಡೀ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಲೈಬ್ರರಿಗೆ ಬರ್ತಾ ಇದ್ರೆ... ನಾವು ಅದರೊಳಗೇ ಇದ್ದಿದ್ದು ಇನ್ನೊಂದು ಹೆಮ್ಮೆಯ, ಗರ್ವದ ವಿಷಯವಾಗಿತ್ತು... ಎಲ್ಲಾ ಸಬ್ಜೆಕ್ಟ್ ಗಳು (disciplines) ನಮಗೆ ನಂಬರ್ ಗಳ ರೂಪದಲ್ಲಿ ಕಾಣಿಸ್ತಿದ್ವು... DDC, UDC, CC, Cataloging..... ಬಹುಷಃ ನಾವೆಷ್ಟೇ Explain ಮಾಡಿದ್ರೂ ಬೇರೇ ಡಿಪಾರ್ಟ್​ಮೆಂಟ್ ನ ಹುಡುಗರಿಗೆ ಇವೆಲ್ಲಾ ಅರ್ಥವಾಗದೇ ಇದ್ದಾಗ... ನಾವೇನೋ ವಿಶೇಷವಾದದ್ದನ್ನ ಓದ್ತಿದ್ದೀವಿ ಅಂತಾ ಒಳಗೊಳಗೆ ಅದೆಷ್ಟು ದಿನಾ ನಕ್ಕಿದ್ವೋ ಗೊತ್ತಿಲ್ಲ...
ಇವತ್ತು ನಾನು ಓದಿದ್ದಕ್ಕೂ ಮಾಡ್ತಾ ಇರೋ ಕೆಲಸಕ್ಕೂ ಸಂಬಂಧವೇ ಇಲ್ಲಾ.. ಆದ್ರೆ ಅಲ್ಲಿ ಕಲಿತ ವಿದ್ಯೆ ನನಗೆ ಇವತ್ತಿಗೂ ಸಹಾಯ ಮಾಡ್ತಾ ಇದೆ... ಮನೆಯಲ್ಲಿ ನನ್ನದೇ ಸಣ್ಣದೊಂದು ಗ್ರಂಥಾಲಯ ಮಾಡ್ಕೊಂಡಿದ್ದೀನಿ ಅಷ್ಟರ ಮಟ್ಟಿಗೆ ಓದಿದ್ದನ್ನು ಸಾಕಾರ ಮಾಡ್ಕೊಳ್ಳೋ ಪ್ರಯತ್ನ... ಇಷ್ಟೆಲ್ಲಾ ಕಲಿಸಿದ ಗುರುವೃಂದದವರಿಗೆ ಶರಣು ಶರಣಾರ್ಥಿ...
ಬೈಯುತ್ತಲೇ ನಮಗೆಲ್ಲಾ ಇಷ್ಟವಾಗಿದ್ದ ವೈ. ವೆಂಕಟೇಶ್ ಸರ್.. Personality Development Class ಮೂಲಕ ನಮಗೆ ಪರಿಚಯವಾಗಿ ಆಮೇಲೆ UDC ಹೇಳಿಕೊಟ್ಟ ಆದಿತ್ಯ ಕುಮಾರಿ ಮೇಡಂ.. There is NO FREE LUNCH in Life ಅಂತಾ Management ಹೇಳಿಕೊಟ್ಟ ಖೈಸರ್ ನಿಕಂ ಮೇಡಂ... Cataloging ಹೇಳಿಕೊಟ್ಟ ಕುಂಬಾರ್ ಸರ್... OK OK ಅಂತಾ ಸದಾ ಆತ್ಮವಿಶ್ವಾಸದಿಂದ ಪುಟಿಯಿತ್ತಿದ್ದ ಚಂದ್ರಶೇಖರ್ ಸರ್... ಇವತ್ತಿಗೂ Information... Information Retrieval ಅಂದಾಕ್ಷಣ ಥಟ್ಟನೇ ನೆನಪಾಗೋ ಹರಿನಾರಾಯಣ್ ಸರ್.. ಸ್ವಲ್ಪ ದಿನ ಪಾಠ ಮಾಡಿ ಉಪಕುಲಪತಿಗಳಾದ ತಳವಾರ್ ಸರ್.. ಎಲ್ಲರನ್ನೂ ನೆನೆಯುತ್ತಾ ಅಲ್ಲಿರಲಾರದ ಸಂಕಟಕ್ಕೆ ಸಮಾಧಾನ ಮಾಡ್ಕೋತೀನಿ... 2 ವರ್ಷಗಳು ನಿಜವಾಗಿಯೂ ನಮ್ಮ ಜೀವನದ ಸುವರ್ಣ ವರ್ಷಗಳು... 50ರ ವಸಂತಕ್ಕೆ ಕಾಲಿಡ್ತಿರೋ ಆ ಚಿರಯೌವ್ವನಿಗನಿಗೆ ನನ್ನ ಕಡೆಯಿಂದ ಶುಭಾಷಯ....

ಬೇರೆಯವರ ಒಳ್ಳೆತನವನ್ನು ದೌರ್ಬಲ್ಯ ಅಂದ್ಕೊಂಡು ......


ಅದು ಸೊಲ್ಲಾಪುರಕ್ಕೆ ಹೋಗೋ ಟ್ರೈನ್... ಯಾವಾಗ್ಲೂ ಜನರಿಂದ ಗಿಜಿಗುಡುವ ಟ್ರೈನ್.. ಹೇಗೋ ಆಶ್ಚರ್ಯಕರ ರೀತಿಯಲ್ಲಿ ನನಗೆ ಸೀಟ್ ಸಿಕ್ತು. ನನ್ನೆದುರು ಒಬ್ಬ ಯುವಕ ನಿಂತಿದ್ದ.. ಸುಮಾರು 25-26ರ ಪ್ರಾಯ.. ಬಹುಷಃ ದಾವಣಗೆರೆಯ ಕಡೆಯವನಿರಬೇಕು. ಅಂತೂ ಅವನಿಗೂ ಯಶವಂತಪುರದಲ್ಲಿ ಸೀಟ್ ಸಿಕ್ತು. ನನ್ನ ಪಕ್ಕ ಬಂದು ಕೂತ. ಇನ್ನೂ ಒಬ್ಬರು ಕೂರಬಹುದಾದಷ್ಟು ಜಾಗವಿತ್ತು. ಯಶವಂತಪುರದಲ್ಲಿ ಒಬ್ಬ ಯುವಕ ಮತ್ತು ಯುವತಿ ನಮ್ಮ ಬೋಗಿಗೇ ಹತ್ತುದ್ರು.. ಬಹುಷಃ ಕೊಲಿಗ್ಸ್ ಅನ್ಸುತ್ತೆ.. ಹೇಗೋ ಅಡ್ಜಸ್ಟ್ ಮಾಡ್ಕೊಂಡು ನಾನು ಕೂತಿದ್ದ ಕೂತ್ರು.. ಮಾತಾಡ್ತಾ ಮಾತಾಡ್ತಾ ಇನ್ನೇನು ನೆಕ್ಸ್ಟ್ ಸ್ಟಾಪ್ ನಲ್ಲಿ ಇಳಿಯೋದಲ್ವಾ... ಅಂತಿದ್ರು... ಈ ದಾವಣಗೆರೆಯ ಹುಡುಗನಿಗೆ ಏನನ್ನುಸ್ತೋ.. ಪಾಪ ಹುಡುಗಿ ಆರಾಮವಾಗಿ ಕೂರ್ಲಿ ಅಂತಾ ‘‘ನೆಕ್ಸ್ಟ್ ಸ್ಟಾಪ್ ನಲ್ಲಿ ಇಳಿತೀರಾ..? ಹಾಗಿದ್ರೆ ಅಲ್ಲಿಯವರೆಗೂ ನಾನು ಡೋರ್ ನಲ್ಲಿ ನಿಂತಿರ್ತೀನಿ..’’ ಅಂತಾ ಎದ್ದು ನಿಂತ. ಆ ಯುವಕ ಯುವತಿ ಮೆಲ್ಲಗೆ ನಕ್ಕರು.. ಯಾಕಂದ್ರೆ ಆ ಟ್ರೈನ್ ನೆಕ್ಸ್ಟ್ ನಿಲ್ಲೋದೇ ತುಮಕೂರಿನಲ್ಲಿ...!! ಎಷ್ಟೇ ಬೇಗ ಅಂದ್ರೂ ಸುಮಾರು 40-50 ನಿಮಿಷದ ಪ್ರಯಾಣ.. ಆ ಹುಡುಗ ನಿಂತೂ ನಿಂತೂ ‘ಈಗ ಇಳಿಬಹುದು...’ ಅಂತಾ ಕಾಯ್ತಲೇ ಇದ್ದ.. ಟ್ರೈನ್ ನಿಲ್ಲೋ ನಿಲ್ಲೋ ಹಾಗೆ ಕಾಣ್ಲಿಲ್ಲ.. ಇತ್ತ ಈ ಸಹೋದ್ಯೋಗಿಗಳಿಬ್ಬರೂ ಮೊಬೈಲ್ ನಲ್ಲಿ ವಿಡಿಯೋ ನೋಡ್ತಾ... ನಗ್ತಾ ಕೂತಿದ್ರು.. ಅವನಿಗೆ ಜಾಗ ಬಿಡುವ ಯಾವ ಲಕ್ಷಣವೂ ಕಾಣ್ಲಿಲ್ಲ.. ನನಗೆ ಯಾಕೋ ಬೇಜಾರಾಯ್ತು... ಅವನಿಗೆ ನನ್ನ ಪಕ್ಕವೇ ಕೂರೋಕೆ ಸ್ವಲ್ಪ ಜಾಗ ಕೊಟ್ಟೆ... ಬೇರೆಯವರ ಒಳ್ಳೆತನವನ್ನು ದೌರ್ಬಲ್ಯ ಅಂದ್ಕೊಂಡು ಅವಕಾಶವನ್ನು ಎನ್ ಕ್ಯಾಶ್ ಮಾಡ್ಕೊಳ್ಳೋ ಇವತ್ತಿನ ಸುಂಸಸ್ಕೃತ, edcuated ಯುವ ಜನತೆಗೆ ಏನ್ ಹೇಳ್ಬೇಕೋ ಗೊತ್ತಾಗ್ಲಿಲ್ಲ...

Tuesday, June 17, 2014



1ರೂಪಾಯಿಗೆ 1 ಕೆಜಿ ಅಕ್ಕಿ ಕೊಡೋದಕ್ಕಿಂತ
ಸಂಸ್ಕರಿಸಿ ತಂದುಕೊಡೋ 1 ಕೆಜಿ ಕಸವನ್ನು 3ರೂಪಾಯಿಗೆ ಕೊಂಡ್ಕೋತೀವಿ ಅಂದಿದ್ರೆ 
ಬೆಂಗಳೂರಿನ ಅರ್ಧ ಕಸ ಖಾಲಿಯಾಗ್ತಾ ಇತ್ತೇನೋ..!!!! 
ಅಲ್ವಾ...?
ಎಂದೋ ಗೀಚಿದ್ದ ಸಾಲುಗಳು
ಇಂದು ಅಣಕಿಸುತ್ತಿವೆ
ಪದಗಳ ಅರ್ಥ ತಿಳಿದು

ಅಕ್ಷರಗಳ ಆಳಕ್ಕಿಳಿದು
ಕಿವಿರನ ಕನವರಿಕೆ....


ಬೆಳ್ಳಂಬೆಳ್ಗಿರೋ ಬಿಳಿ ಹಾಳೆ ತಕ್ಕಂಡು
ಪಕ್ಕದ್ಮನೆ ಇಮಲಕ್ಕನ್ ಮಗಿಂತವ
ಪೆನ್ಸಿಲ್ ಇಸ್ಕಂಡು ಬರಿಯಕ್ ಕುಂತ್ಕಂಡ್ರೆ
ಮಾತಾಡದ್ನೇ ಮರ್ತೋಗಿರೋ ನಮ್ಮೂರ್ ಮೂಗ್ನಂಗೆ
ಬರೆಯೋಕ್ಮುಂಚೇನೇ
ಪದಗಳೆಲ್ಲಾ ಮರ್ತೋಯ್ತವೇ...

ಬಸ್ಸಾರು ಮುದ್ದೆ ಉಂಡ್ಬುಟ್ಟು
ಕಣ್ಣೆಳ್ದಂಗಾಗಿ ಮುಕ್ತ ಧಾರಾವಾಹಿಯ
ನೋಡೋದ್ಬುಟ್ಟು
ಚಾಪೆ ಮ್ಯಾಲುಳ್ಕಂಡು ನಿನ್ನೊಂದ್ ಕಿತ ನೆನ್ಕತ್ತಿದ್ದಂಗೆ
ನಿದ್ದೋಗ್ ಆಕಾಸ ಸೇರ್ಕಂತದೇ
ಬೆಳಗಾನ ಸಿವ್ರಾತ್ರಿಯಾಯ್ತದೆ..

ಅರೆಕಲ್ಲತವಾ ಎಮ್ಮೆ ಮೇಸ್ಕಂಡು
ವೊಂಗೆ ಮರುದ್ ನೆಳ್ಳಲ್ಲಿ ತೂಕಡಿಸ್ಕಂಡ್
ಕುಂತಾಗ... ಕನಸೊಂದ್ ಬಿದ್ದಂಗಾಯ್ತದೆ
ಕನಸ್ನಾಗೆ ಬ್ಯಾರೋನ್ ಜೊತ್ಗೆ ನಿನ್
ಮದುವ್ಯಾದಂಗಾಯ್ತದೆ...
ಬೆಚ್ ಬಿದ್ದು... ಎಚ್ರಾಗಿ
ಹಟ್ಟಿತಕ್ ಬರೋದ್ರೊಳ್ಗೆ
ಚಳಿಯಿಡ್ದಂಗಾಯ್ತದೆ,
ಸಂಜಿಗ್ ಜರ ಬಂದಂಗಾಯ್ತದೆ...
ಎದೆ ಕಿವುಚ್ದಂಗಾಯ್ತದೆ...

ನಿನ್ನೇ ನೆನ್ಕಂಡ್ ಜೀವ ವೋದಂಗಾಯ್ತದೆ...

ಬೆತ್ತಲ ಬೆಳಕು...
.................................................................................................................................................
ಸುತ್ತಲೂ ಕಗ್ಗತ್ತಲು... ಎತ್ತ ತಿರುಗಿದರೂ ಕಪ್ಪು..
ಗಾಢ ಮೌನ...
ಎಲ್ಲಿರುವೆ ನಾನು...?

ದೂರದಲ್ಲೆಲ್ಲೋ ಚೂರು ಬೆಳಕು..
ಬೆಳಕಿನಡಿಯಲ್ಲಿ ನಡೆಯುತ್ತಲೇ ಇದೆ ನರಮೇಧ..
ಅಬ್ಬಾ.. ರಕ್ತ.. ಚೀರಾಟ...
ಕೇಳುವವರಿಲ್ಲವೇ ಯಾರೂ...
ಎಲ್ಲಿರುವೆ ನಾನು..?

ತುಸು ದೂರ ನಡೆದರೆ ಸಿಕ್ಕೇ ಬಿಡುವುದು ಊರು,
ಸೂರಿಲ್ಲ.. ಕೂಳಿಲ್ಲ... ಏನೆಂದರೆ ಏನೂ ಇಲ್ಲ..
ಎಲ್ಲ ಕಳೆದುಕೊಂಡಿಹ ಮಂದಿಗೆ
ಗತಿಯಿಲ್ಲವೇ ಯಾರೂ
ಎಲ್ಲಿರುವೆ ನಾನು...?

ಒಂದೆಡೆ,
ಮೌನ ಭೇಧಿಸಿ ಅಬ್ಬರದ ಪ್ರಚಾರ
ಹೆಂಡದ ಮತ್ತಿನಲ್ಲಿ ಮುಗ್ಧ ಮತದಅರ
ದಅರಿ ತಪ್ಪಿಸುತಿಹನೊಬ್ಬ ಸರದಾರ
ಮಗುಲಲ್ಲಿ
ಬೆನ್ನಿಗಂಟಿದ ಹೊಟ್ಟೆಯ
ಎಲುಬಿನಾ ಗೂಡೊಂದು
ಪರಿತಪಿಸುತ್ತಲಿದೆ
ಎಲ್ಲಿರುವೆ ನಾನು...?

ಬೀದಿಯ ತುಂಬಾ ಮೈಚಾಚಿದಾ ಮಲ್ಲಿಗೆ
ದೇಹದಾಹವ ತೀರಲು
ಬಗೆ ಬಗೆದು ಬಯಸಿಹನು
ಹೆಣ್ಣ ಜೀವ ಹಿಂಡುತ್ತಾ

ತನ್ನತನವ ಬಲಿಕೊಡುತ್ತಿಹಳೊಬ್ಬಳು
ನೂರರ ನೋಟಿಗೆ
ಮನೆಯಲ್ಲಿ ಹಾಲಿಲ್ಲದೇ ಕೊರಗುತ್ತಿಹ ಕಂದನ ನೆನಯುತ್ತಾ..

ಕತ್ತಲೇ ಲೇಸೆಂದು ಬಗೆದು
ಹಿಂತಿರುಗಿದೆ, ಕಾಗರ್ತ್ತಲ ಗರ್ಭಕ್ಕೆ
ಛೀ, ಮಾನವ... ವಿಷಯಲಂಪಟ ನೀನೆಂದು
ನೂಕಿಯೇ ಬಿಟ್ಟಿತು

ಬೆತ್ತಲ ಬೆಳಕಿಗೆ.....

Sunday, June 15, 2014


ಅಯ್ಯೋ ನಾನ್ ಹೇಳಿದ್ದು ತಪ್ಪಾಗಿದ್ರೆ..’
ಅಂತಾ ದೊಡ್ಡವರ ಮುಂದೆ ನಾನ್ ಹೇಳೋದಾ.. ಬೇಡಪ್ಪಾ..’
ಅವರ ಮುಂದೆ ನಾನಾ...?’ ಅಂತಾ ಮನಸ್ಸಿನೊಳಗೆ ಮಂಡಿಗೆ ತಿಂತಾ.... ಅನ್ನಿಸಿದ್ದನ್ನು ಚಿಕ್ಕವನು ಅನ್ನೋ ಹಿಂಜರಿಕೆಯಿಂದ ಹೇಳದೇ ತನ್ನೊಳಗೇ ಉಳಿಸಿಕೊಂಡಾಗಲೆಲ್ಲಾ... ನನ್ನ ಇಂಗ್ಲೀಷ್ ಉಪನ್ಯಾಸಕರಾದ ರಮೇಶ್ ಬಾಬು ಹೇಳ್ತಾ ಇದ್ದ ಮಾತು ನೆನಪಾಗುತ್ತೆ....

ಪ್ರಾಯ ಕೂಸಾದರೇನು... ಅಭಿಪ್ರಾಯ ಕೂಸೆ..?





ಬದುಕು.......
‘‘ಚಿಕ್ಕ ಆಸೆಗಳ ಜೋಪಡಿ.......

   ದೊಡ್ಡ ಕನಸುಗಳ ಮಹಲ್.....’’

Saturday, June 14, 2014

ಚಂದಿರ ನೀಲಿಯಾಗುವ ಹೊತ್ತು...


ಚಂದಿರ ನೀಲಿಯಾಗುವ ಹೊತ್ತು...
ನೀಲಿ ಕಂಗಳ ಚೆಲುವೆಯ ನೆನಪಿಗೆ 
ನಸ್ಸು ಹಾತೊರೆಯುತ್ತಿತ್ತು...
ಅವಳದೇ ನೆನಪಲ್ಲಿ
ಚಂದಿರನ ಹಾಲು ಬೆಳದಿಂಗಳ ನೆರಳಲ್ಲಿ
ಕಣ್ಣಾಮುಚ್ಚಾಲೆಯಾಡುವ ಕನಸ್ಸು ಹೊತ್ತು..

ಕಪ್ಪು ಮೋಡಗಳ ಮರೆಯಲ್ಲಿ ನಿಂತು
ನನ್ನನ್ನೇ ದಿಟ್ಟಿಸಿ ನೋಡಿ ಕಣ್ಣು ಮಿಟುಕಿಸಿ
ಬಾ ಎಂದು ಕರೆದಂತ ನೆನಪು...

ಕೈ ಹಿಡಿದು ನಡೆವಾಗ ತುದಿ ಬೆರಳ ಸ್ಪರ್ಶಿಸಿ
ಪುಳಕಗೊಂಡವನ ಕೆನ್ನೆಗೆ
ಮೃದು ಕೈಯಲ್ಲಿ ತಟ್ಟಿ ಹೋದವಳ ನೆನಪು

ಕೋನು ಐಸ್ ಕ್ರೀಮೊಳಗೆ ಮಿಂದಿದ್ದ
ತುಟಿಗಳನ್ನುನೋಡುತ್ತಾ 
ಕೆನ್ನೆಗಂಟಿದ್ದ ಕ್ರೀಮನ್ನು ಕರ್ಚೀಫಿನಿಂದೊರೆಸಿ
ಯಾರಿಗೂ ಕಾಣದಂತೆ ಕರ್ಚೀಫಿಗೊಂದು
ಮುತ್ತುಕೊಟ್ಟ ಕಳ್ಳ ನೆನಪು.....


ಕೆಂಪಾಗಿದ್ದ ಕಣ್ಣುಗಳನ್ನು ಮುಚ್ಚಿದರೆ ಸಾಕು
ಆ ನೆನಪುಗಳನ್ನೇ ನೆನೆಯುತ್ತಿತ್ತು...

ಚಾಚಿದ ಅವಳ ಅಂಗೈ ಮೇಲೆ 
ಧಾರೆಯೆರೆಯುವಾ ಹೊತ್ತು...
ನೆನ್ನೆಗಳನ್ನು ನೆನೆದು ಮನಸ್ಸು ಅಳುತ್ತಲಿತ್ತು...

ಈಗಲೂ ಅಳುತ್ತಲೇ ಇದೆ ನೆನಪುಗಳಾ ಹೊತ್ತು..
ಇದು
ಚಂದಿರ ನೀಲಿಯಾಗುವಾಹೊತ್ತು



ಧರೆಗೆ ಬರುವ ಮೊದಲೇ.....
budha
                 
ಜಗತ್ತು ನಿನ್ನನ್ನು ಜ್ಞಾನಿ ಅಂತಿದೆ.. ತಿಳಿದವನು ಅಂತಿದೆ... ಸತ್ಯದನ್ವೇಷಕ ಅಂತಿದೆ... ಇದೆಲ್ಲಾ ಇರಬಹುದು.. ಆದರೆ ನಿನ್ನನ್ನೂ ದೈವತ್ವಕ್ಕೇರಿಸಿಬಿಟ್ಟರಲ್ಲಾ ಮಗೂ...
ಈ ತಾಯಿಯ ಮುದ್ದು ಕಂದ ನೀನು.. ಜಗತ್ತಿನ ಯಾವ ತಾಯಿಯೂ ನನ್ನಷ್ಟು ಹೆಮ್ಮೆಪಟ್ಟಿರಲಾರಳು.. ನೀನು ನನ್ನ ಗರ್ಭದಲ್ಲಿ ಟಿಸಿಲೊಡೆದ ಕ್ಷಣದಿಂದ ಒಬ್ಬ ಹೆಣ್ಣಾಗಿ ಒಂಭತ್ತು ಮಾಸಗಳು ನಾನು ಅನುಭವಿಸಿದ ಸಂತೋಷ... ಹೆಮ್ಮೆ... ನೋವು... ತೃಪ್ತಿ.. ಮತ್ಯಾರಿಗೂ ಸಾಧ್ಯವಿಲ್ಲ...
ನಿನ್ನ ಪುಟ್ಟ ಕಾಲುಗಳಿಂದ ನನ್ನ ಹೊಟ್ಟೆಯನ್ನು ಒದೆಯುವಾಗ ‘‘ಇವನಿಗೆಷ್ಟು ಧಾವಂತ ಹೊರಬರಲು ’’ ಅಂತಿದ್ದೆ... ಆದರೆ ಈಗ ನನಗೆ ಅರಿವಾಗ್ತಾ ಇದೆ.. ನನ್ನ ಹೊಟ್ಟೆಯನ್ನೊದ್ದು ಬಂದ ನಿನೆಗೆ ಈ ಜಗದ ಅಜ್ಞಾನದ, ಮೌಢ್ಯತೆಯ ಕತ್ತಲೆಯನ್ನು ಒದೆಯುವ ಧಾವಂತವಿತ್ತು ಅಂತಾ... ಪ್ರಶ್ನಾತೀತವಾಗಿದ್ದ ಈ ಸಮಾಜದಲ್ಲಿ ಅರಿವಿನ ಹರಿಗೋಲು ಹಿಡಿದು ಸತ್ಯದ ಅನ್ವೇಷಣೆಗೆ ತೊಡಗೋ ನಿನ್ನಂತ ಒಬ್ಬ ನಾವಿಕ ಈ ದೇಶಕ್ಕೆ ಬೇಕಿತ್ತು ಮಗು...
ಆ ನಾವಿಕನ ಭಾವಲಹರಿ ಹರಿಯಲು ನಾನು ಕಾರಣಳಾದೆ ಎಂದರೆ ನಾನೆಷ್ಟು ಭಾಗ್ಯವಂತೆ ಅಲ್ವಾ...? ಇತಿಹಾಸದ ಪುಟಗಳಲ್ಲಿ ನಿನ್ನ ಹೆಸರಿನೊಂದಿಗೆ ಈ ಅಮಾಯಕಳ ಹೆಸರೂ ತಳುಕು ಹಾಕಿಕೊಂಡಿದೆಯೆಂದರೆ ನನ್ನ ಪುಣ್ಯದ ಫಲ ಅದು...
ನಿನ್ನಂತಹ ಅಗಾಧವಾದ ಚೈತನ್ಯವನ್ನು ನನ್ನ ಗರ್ಭದಲ್ಲಿಟ್ಟುಕೊಳ್ಳುವ ಶಕ್ತಿ ಅದೆಲ್ಲಿಂದ ಬಂತೋ ನಾನರಿಯೇ... ಬ್ರಹ್ಮಾಂಡದ ಸತ್ಯವನ್ನೆಲ್ಲಾ ಮಾಂಸದ ಮುದ್ದೆಯನ್ನಾಗಿಸಿ ನನ್ನೊಳು ಹೊತ್ತಂತಾಗಿತ್ತು.. ಮುಂದೊಂದು ದಿನ ನೀನು ಈ ಮಟ್ಟಿಗೆ ಪ್ರಜ್ವಲಿಸುತ್ತೀಯೆ ಎಂದು ತಿಳಿದಿದ್ದರೆ, ಆ ಭಯದ ಪ್ರಜ್ಞೆಯಲ್ಲಿಯೇ ನಾನು ಏನಾಗುತ್ತಿದ್ದೆನೋ ಗೊತ್ತಿಲ್ಲಾ..

ನನ್ನೆಲ್ಲಾ ಅಂತಃಸತ್ವವನ್ನೆಲ್ಲಾ ಹೀರಿಬಿಟ್ಟೆಯಲ್ಲಾ ನೀನು.... ಗರ್ಭದೊಳಗಿರುವಾಗ ನಿನ್ನ ಚಲನೆಯೇ ನನಗೆ ಆ ಮಟ್ಟಿನ ಆಹ್ಲಾದಕರ ಭಾವ ನೀಡುತ್ತಿತ್ತು... ಸಾವಿರಾರು ವರ್ಷಗಳ ಕಾಲ ಚಿರವಾಗಿರುವ ಮಗನೊಬ್ಬ ನನ್ನೊಳು ಆವೀರ್ಭವಿಸಿದನೆಂದು ನೆನೆದರೆ ನನ್ನೊಳಗೆಂತದೋ ಮಿಂಚಿನ ಸಂಚಾರ.. ಜಗತ್ತಿಗೇ ಗೊತ್ತು ಈ ಮಹಾಪುರುಷನ ತಾಯಿ ನಾನೆಂದು... ಆದರೆ ಈ ಜಗತ್ತಿನ ಮುಂದೆ ಒಮ್ಮೆಯೂ ನಿನ್ನಿಂದ ಅಮ್ಮಾ ಎನಿಸಿಕೊಳ್ಳಲಿಲ್ಲಾ...
ಅದೆಲ್ಲಿತ್ತು ಮಗು ನಿನ್ನೊಳು ಅಂತಾ ಜ್ಞಾನ.. ಜಗದ ಸೊಗಸನ್ನು ಅರಿಯದ ನನಗೆ ಗರ್ಭದಲ್ಲಿಯೇ ಜ್ಞಾನದ ಸೊಗವನ್ನುಣಿಸಿದವನು ನೀನು.. ಲುಂಬಿಣಿಯಲ್ಲಿ ನಿನ್ನ ಹೆತ್ತ ದಿನದಿಂದ ನನ್ನ ದೇಹದ ಅವಿಭಾಜ್ಯ ಅಂಗವೇ ಕಳೆದು ಹೋಯಿತೇನೋ ಎನಿಸುತ್ತಿತ್ತು... ಆದರೆ ನಂತರವೇ ನನಗೆ ತಿಳಿದಿದ್ದು.. ನನ್ನ ದೇಹದ ಅಣು - ಅಣುವಿನ ಸತ್ವವನ್ನೆಲ್ಲಾ ಹೊತ್ತು ಭೂಮಿಗೆ ಬಂದವನು ನೀನೆಂದು..
‘‘ಧರೆಗೆ ಬರುವ ಮೊದಲೇ ನನ್ನೊಳು ದಮ್ಮವನ್ನು ಬಿತ್ತಿದವನು ನೀನು’’
ನಾನು ಇಲ್ಲವಾಗಿಲ್ಲ ಮಗೂ.. ನಿನ್ನಲ್ಲಿ.. ನಿನ್ನೊಳಗೆ.. ನಿನ್ನೊಡನೆ ಈ ಪಾಮರಳ ಹೆಸರೂ ಚಿರವಾಗಿ ಉಳಿದಿದೆ.. ಎಂದೂ ಆರದ ಬೆಳಕಿನಡಿಯ ನೆರಳಿನಂತೆ. ಸಾಂಚಿಯಲ್ಲಿ ಕೊನೆಯ ಭೋದನೆ ನೀಡಿ ಅರೆಗಣ್ಣಲ್ಲಿ ಮಲಗಿದ ನಿನ್ನ ಕಂಡರೆ.. ‘‘ಅಯ್ಯೋ ನನ್ನ ಕಂದ ಈ ಜಗತ್ತಿನ ಮತ್ಯಾವ ಸಮಸ್ಯೆಗೆ ಪರಿಹಾರ ಕಾಣಲು ವಿಶ್ರಮಿಸುತ್ತಿರುವನೋ.. ಸೆರಗ ಅಂಚಲ್ಲಿ ಗಾಳಿ ಬೀಸಲೇ..’’  ಎಂದೆನಿಸುತ್ತದೆ.. ‘‘ನಿನ್ನ ತಲೆಯನ್ನು ಮಡಿಲಲ್ಲಿಟ್ಟು ಲಾಲಿ ಹಾಡಲೇ..?’’ ಎಂದೆನಿಸುತ್ತದೆ.  ಅಜ್ಞಾನದ ಕಿಚ್ಚನ್ನು ದಮ್ಮದ ತಂಗಾಳಿಯಲ್ಲಿ ಆರಿಸಿದವನಿಗೆ ಗಾಳಿ ಬೀಸಲು ನಾನೆಷ್ಟರವಳು.. ಭೂಮಿ ತೂಕದ ನಿನಗೇ ಮಡಿಲೊಡ್ಡಿರುವ ನಾನೆಂತ ಮರುಳೆ ಎಂದು ನಗು ಬರುತ್ತದೆ..
ಈ ಹುಚ್ಚು ತಾಯಿಯ ಮನದ ಬಯಕೆಯಿದು..
‘‘ಮತ್ತೇ ಹುಟ್ಟಿ ಬಾ ಕಂದ.. ಈ ತಾಯಿಯ ಗರ್ಭದಲ್ಲಿ....’’

Sunday, June 8, 2014



ಕೊರಗನ ಕೊರಗು....

ನೆನ್ನೆ ದಿನ ಮಾದೇವಪ್ಪಾರ ಮನೆ ಟೀವಿಲೀ ಆ ಸುದ್ದಿ ನೋಡ್ದಾಗಿಂದ ಕೊರಗ ರಾತ್ರಿಯೆಲ್ಲಾ ನಿದ್ದೆಯಿಲ್ಲದೇ ಒದ್ದಾಡ್ತಿದ್ದ... ಅವನ ಹೆಂಡ್ರು ಸಾಕಿ ‘ಇದ್ಯಾಕಿಂಗ್ ನುಲಿತಿದ್ದೀ... ಸುಮ್ಕ ಮಲ್ಕಂಡಿಯೋ ಹೆಂಗೇ... ವತ್ತಾರಿಕೆ ಮುಯ್ ಆಳಿಗೋಗ್ಬೇಕು..’’ ಅಂತಾ ಸಾವಿರ ಸಲ ಒಟಗುಟ್ಟಿದ್ರೂ ಕೊರಗನ ಕೊರಗು ನಿಂತಿರ್ಲಿಲ್ಲಾ. ಬೆಳಿಗ್ಗೆ ಹೊತ್ತುಟ್ದಾಗಿಂದ್ಲೂ ಅದೇ ಯೋಚನೆ... ಕೆರೆಕಡೀಕ್ ಹೋಗ್ ಬಂದು ರಾಜಣ್ಣನ ಹೋಟ್ಲು ತಾವ ಕೂತ್ಕಂಡು ಪ್ಲಾಸ್ಟಿಕಿನ್ ಲೋಟದಲ್ಲಿ ಅರ್ಧ ನೀರ್ ಕಾಪಿ ಕುಡಿವಾಗ್ಲೂ ಅವನ ಸಂಕಟ ಕಮ್ಮಿಯಾಗಿರ್ಲಿಲ್ಲ... ವೊತ್ ವೊತ್ತಾರೆನೇ ಇವ್ನ ಹಾಳ್ ಮುಖ ನೋಡಕ್ಕಾಗ್ದೇ ರಾಜಣ್ಣನೇ ಕೇಳ್ದಾ.. ‘‘ಇದ್ಯಾಕ್ಲಾ ಕೊರ್ಗ... ಇಂಗ್ ಇದ್ದಿಯೇ.. ಮೊನ್ನೆ ದಿನ ಕಳ್ಳೀಪಾಳ್ಯದ್ ಪಳೇಕಮ್ಮನ ಜಾತ್ರೇಲ್ ತಿಂದ್ ಬಾಡುಇನ್ನೂ ಕರಗಿಲ್ಲ ಅನ್ನಂಗದೇ....’’ ರಾಜಣ್ಣಂಗೆ ತಮಾಷೆ... ಇಲ್ಲಿ ಕೊರಗಂಗೆ ಪ್ರಾಣ ಹೋದಂಗಾಯ್ತಾದೆ... ಕೈಲಿದ್ದ ಕಾಪೀ ಲೋಟದಲ್ಲಿದ್ದ ಕೊನೆ ಗುಟುಕನ್ನ ಸೋರ್ ಅಂತಾ ಸದ್ ಮಾಡಿ ಕುಡ್ದು... ‘‘ಇಲ್ ಕಣ್ ತಗಳಣೋ.. ಅದ್ಯಾಕಂಗಂತೀರಿ...’’ ಅಂದ
‘‘ ಮತ್ಯಾಕ್ ಇಂಗ್ ಅಳ್ಳೆಣ್ಣೆ ಕುಡ್ದೋನಂಗ್ ಮಕ ಮಾಡ್ಕಂಡಿದ್ದಿಯೋ...?’’
‘‘ಇದೇನ್ ಇಂಗ್ ಕೇಳಿರಿ... ನೆನ್ನೆ ಜಿನ ಟಿಬಿ ನೋಡ್ಲಿಲ್ವರಾ....?’’
‘‘ದಿನಾ ನೋಡ್ತೀವಲ್ಲೋ.. ನೆನ್ನೆ ಏನ್ ಸ್ಪೆಷಲ್ಲು..’’
‘‘ಅದೇ ಕಣಣ್ಣೋ... ಅದ್ಯಾವುದೋ ಓರ್ನಾಗೇ.. ಇಂಗ್ ಮುಟ್ಟುಸ್ಕೊಳ್ದೇ ಇರೋರ್ನ ಮುಟ್ಟುಸ್ಕೊಳ್ಳಂಗ್ ಆಗಬೇಕು ಅಂತಾ ಬುದ್ಯೋರೆಲ್ಲಾ ಉಪ್ವಾಸ ಕುತ್ಕಂಡವ್ರಂತೆ...’’
‘‘ಅಲಾ ಬಡ್ಡೈದ್ನೆ.. ಇಷ್ಟೋಂದ್ ವಿಷ್ಯಾ ತಿಳ್ಕಳಂಗಾದ್ಯಾ...? ಅದ್ಕೇನಿವಾಗ..’’
‘‘ಏನಣ್ಣಾ.. ನಮ್ಗೋಸ್ಕರ ಬುದ್ಯೋರ್ ಹಸ್ಕಂಡಿದ್ರೆ ಸಿವ ಮೆಚ್ಚಾನಾ.. ನಮಗ್ ಒಳ್ಳೆದಾದದಾ... ಅವ್ರು ಹಸ್ವಿನ್ ಶಾಪ ನಮಗ್ ತಟ್ಟದೇ ಇದ್ದಾದ... ಇದ್ಯಾಕೋ ಸರಿ ಕಾಣ್ವಲ್ದು...’’ ತಲೆ ಬಗ್ಗಿಸಿ ನೆಲ ತೋಯಿಸ್ತಿದ್ದ ಕೊರಗನ ಕಣ್ಣೀರು ರಾಜಣ್ಣಂಗೆ ಕಾಣ್ಲೇ ಇಲ್ಲಾ... ಅವನಾಗ್ಲೇ ಗಿರಾಕಿಗಳ ಜೊತೆ ಮಾತಾಡ್ತಾ ಇದ್ದ... ಕೊರಗನ ಸಂಕಟ ಇನ್ನೂ ಜಾಸ್ತಿಯಾಗಿ... ಏನೋ ನಿರ್ಧಾರ ಮಾಡ್ದೋನಂಗೆ ಹಟ್ಟಿಗೋಗಿ.. ಕೈಕಾಲು ಮುಖ ತೊಳ್ಕಂಡು ಅಲ್ಲೇ ಬೇಲಿ ಪಕ್ಕದಲ್ಲಿ ಬಿಟ್ಟದ್ದ ಎರಡು ಕೆಂಪ್ ದಾಸ್ವಾಳದ ಹೂ ಕಿತ್ಕೊಂಡು ಆಂಜನೇಯನ ದೇವಸ್ಥಾನದ ಬಾಗಿಲಿಗ್ ಬಂದು ,
‘‘ಐನೋರೆ... ಐನೋರೆ... ತಗಳೀ.. ಯಾಕೋ ಮನಸಿಗ್ ಹಿಂಸೆ ಆಗ್ತಾದೆ... ಸ್ವಾಮಿಗ್ ಒಂದ್ ಪೂಜೆ ಮಾಡಿ... ಅಂಗ್ ಈ ಹನ್ನೊಂದ್ ರುಪಾಯಿ ತಪ್ಪು ಕಾಣ್ಕೆ ಒಪ್ಪುಸ್ಕಳಿ...’’ ಅಂತಾ ಬಾಗ್ಲಲ್ ಕೂತ್ಕಂಡು ಹೊಸ್ತಿಲ ಮೇಲೆ ಹೂವು ಹನ್ನೊಂದ್ ರೂಪಾಯಿ ಇಟ್ಟ... ಐನೋರ್ ಬಂದು ನೀರ್ ಚುಮುಕಿಸಿ ಆ ಹೂವು... ಹನ್ನೊಂದ್ ರೂಪಾಯಿಯನ್ನ ‘ಪವಿತ್ರ’ಗೊಳಿಸಿ ಒಳಗಡೆ ತೊಗೊಂಡ್ರು... ಗರ್ಭಗುಡಿಯಲ್ಲಿದ್ದ ಆಂಜನೇಯ ‘ಅಸ್ಪೃಶ್ಯತೆ ನಿವಾರಣೆ ಆಯ್ತು..’’ ಅಂತ ನಕ್ಕಂಗಾಯ್ತು... ಕೊರಗ ದೇವಸ್ಥಾನದ ಬಾಗಿಲಲ್ಲಿ ಕೂತೇ ಇದ್ದ... ಪ್ರಗತಿಪರ ಸ್ವಾಮಿಗಳು ಬೀದರ್ ನಲ್ಲಿ ಅಸ್ಪೃಶ್ಯತೆ ನಿವಾರಣೆಗಾಗಿ ಉಪವಾಸ ಕೂತಿದ್ರು... ದಿನಾ ಒಪ್ಪೊತ್ತು ಊಟ ಮಾಡೋ ಕೊರಗನ ಮಗ ಸಣ್ಣ... ಸಣ್ಣಗೆ ಅಳ್ತಲೇ ಇದ್ದ...